ADVERTISEMENT

ರಕ್ಷಣಾ ಪಡೆಯ ತರಬೇತಿಯಲ್ಲಿ ಬದಲಾವಣೆ ಅಗತ್ಯ: ವಾಯುಪಡೆಯ ಮುಖ್ಯಸ್ಥ ಎ.ಪಿ. ಸಿಂಗ್

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 15:37 IST
Last Updated 24 ಅಕ್ಟೋಬರ್ 2025, 15:37 IST
ವಿವಿಧ ತರಬೇತಿ ಸಂಸ್ಥೆಗಳ ಕಮಾಂಡರ್‌ಗಳ ಜತೆಗೆ ಎ.ಪಿ. ಸಿಂಗ್ ಸಭೆ ನಡೆಸಿದರು
ವಿವಿಧ ತರಬೇತಿ ಸಂಸ್ಥೆಗಳ ಕಮಾಂಡರ್‌ಗಳ ಜತೆಗೆ ಎ.ಪಿ. ಸಿಂಗ್ ಸಭೆ ನಡೆಸಿದರು   

ಬೆಂಗಳೂರು: ‘ರಕ್ಷಣಾ ಪಡೆಗಳು ಯುದ್ಧಕ್ಕೆ ಸಿದ್ಧವಾಗಲು ಸೇನಾ ತರಬೇತಿಯಲ್ಲಿ ಬದಲಾವಣೆ ಅತ್ಯಗತ್ಯ’ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್‌ ಮಾರ್ಷಲ್ ಎ.ಪಿ. ಸಿಂಗ್ ಅಭಿಪ್ರಾಯಪಟ್ಟರು. 

ಭಾರತೀಯ ವಾಯುಪಡೆಯ ತರಬೇತಿ ಕಮಾಂಡರ್‌ಗಳ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ತರಬೇತಿ ಕಮಾಂಡ್ ಕಮಾಂಡರ್‌ಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು, ಎಲ್ಲ ತರಬೇತಿ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು. ಸಂಸ್ಥೆಗಳ ಸಾಧನೆಯನ್ನು ಶ್ಲಾಘಿಸಿದ ಅವರು, ಸುಧಾರಣೆಗಳು ಅಗತ್ಯವಿರುವ ಪ್ರಮುಖ ಕ್ಷೇತ್ರಗಳನ್ನು ಗುರುತಿಸಿ ಸಲಹೆಗಳನ್ನು ನೀಡಿದರು.

‘ಜಾಗತಿಕ ಬೆದರಿಕೆಗಳು ಮತ್ತು ತಂತ್ರಜ್ಞಾನಗಳ ವಿಕಾಸದ ಈ ಸಂದರ್ಭದಲ್ಲಿ, ರಕ್ಷಣಾ ಪಡೆಗಳು ಹೊಂದಿಕೊಳ್ಳುವ ತರಬೇತಿ ನೀಡಬೇಕಿದೆ. ಯುದ್ಧಕ್ಕೆ ಸಿದ್ಧವಾಗಿರುವುದನ್ನು ಖಾತ್ರಿಪಡಿಸಿಕೊಳ್ಳಲು ಮಿಲಿಟರಿ ತರಬೇತಿಯಲ್ಲಿ ಬದಲಾವಣೆಗಳನ್ನು ಮಾಡಬೇಕಿದೆ’ ಎಂದು ಹೇಳಿದರು.

ADVERTISEMENT

ಈ ಸಮ್ಮೇಳನದಲ್ಲಿ ತರಬೇತಿ ಕಮಾಂಡ್‌ನ ಅಡಿಯಲ್ಲಿರುವ ಎಲ್ಲ ತರಬೇತಿ ಸಂಸ್ಥೆಗಳ ಕಮಾಂಡರ್‌ಗಳು ಭಾಗವಹಿಸಿದ್ದರು. ತರಬೇತಿ, ಮೂಲಸೌಕರ್ಯದ ಆಧುನೀಕರಣ ಮತ್ತು ಕಾರ್ಯಾಚರಣೆಯ ಅಗತ್ಯಗಳಿಗೆ ಅನುಗುಣವಾಗಿ ಬೋಧನಾ ಪದ್ಧತಿಗಳ ಅಳವಡಿಕೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆಗಳು ನಡೆದವು.

ಸಮ್ಮೇಳನದ ಭಾಗವಾಗಿ ಕಾರ್ಯಾಚರಣೆಗಳು, ನಿರ್ವಹಣೆ ಮತ್ತು ಆಡಳಿತದಲ್ಲಿನ ಅತ್ಯುತ್ತಮ ಸಾಧನೆಗಳನ್ನು ಗುರುತಿಸಿ, ವಾಯು ಪಡೆಯ ಕೇಂದ್ರಗಳಿಗೆ ಟ್ರೋಫಿಗಳನ್ನು ಪ್ರದಾನ ಮಾಡಲಾಯಿತು. ‘ಪ್ರೈಡ್ ಆಫ್ ದಿ ಟ್ರೈನಿಂಗ್ ಕಮಾಂಡ್’ ಟ್ರೋಫಿಯನ್ನು ವಾಯುಪಡೆ ಅಕಾಡೆಮಿಗೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.