ಬೆಂಗಳೂರು: ‘ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು ಸಾರ್ವಜನಿಕ ಸಾರಿಗೆ ಬಳಕೆಯನ್ನು ಪ್ರೋತ್ಸಾಹಿಸುವುದರ ಜತೆಗೆ ಭವಿಷ್ಯದಲ್ಲಿ ವಿದ್ಯುತ್ಚಾಲಿತ ವಾಹನಗಳಿಗೆ (ಇವಿ) ಮಾತ್ರ ಅನುಮತಿ ನೀಡುವುದು ಸೂಕ್ತ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ. ‘ಸಾಂಪ್ರಾದಾಯಿಕ ಇಂಧನ ಬಳಸುವ ವಾಹನಗಳಿಂದ ವಾಯು ಮಾಲಿನ್ಯ ಹೆಚ್ಚುತ್ತಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಬೆಂಗಳೂರಿನಂತಹ ಮಹಾನಗರಗಳಲ್ಲಿ ಅಧಿಕ ಸಂಖ್ಯೆಯಲ್ಲಿ ವಾಹನಗಳಿರುವುದರಿಂದ ಮಾಲಿನ್ಯದ ಪ್ರಮಾಣವು ಅಗಾಧವಾಗಿದ್ದು, ನಗರದ ಜನ ಸಾಂದ್ರತೆಯೂ ಹೆಚ್ಚಾಗಿರುವ ಕಾರಣ ಮಾಲಿನ್ಯ ಹೆಚ್ಚು ಜನರನ್ನು ಬಾಧಿಸುತ್ತಿದೆ. ವಾಯು ಮಾಲಿನ್ಯದಿಂದ ನವದೆಹಲಿಯಂತೆ ಬೆಂಗಳೂರು ನಗರ ಸಹ ಕುಖ್ಯಾತಗೊಳ್ಳುವ ಪೂರ್ವದಲ್ಲಿಯೇ ನಾವು ಎಚ್ಚೆತ್ತುಕೊಳ್ಳಬೇಕು’ ಎಂದು ಹೇಳಿದ್ದಾರೆ.
‘ಪರಿಸರದ ಮೇಲೆ ದೂರಗಾಮಿ ದುಷ್ಪರಿಣಾಮಗಳನ್ನು ಮಿತಿಗೊಳಿಸುವ ನಿಟ್ಟಿನಲ್ಲಿ, ವಾಯು ಮಾಲಿನ್ಯವನ್ನು ನಿಯಂತ್ರಿಸಲು ನಮ್ಮ ತಲೆಮಾರು ಕ್ರಮ ಕೈಗೊಳ್ಳಬೇಕಿದೆ. ಸರ್ಕಾರವು ಈ ಬಗ್ಗೆ ಉತ್ತರದಾಯಿತ್ವವನ್ನು ಹೊಂದಿದೆ. ಆದ್ದರಿಂದ ಸಾರ್ವಜನಿಕ ಸಾರಿಗೆ ಬಳಕೆಯನ್ನು ಹೆಚ್ಚಿಸುವುದು ಅತ್ಯಗತ್ಯವಾಗಿದೆ. ಇದರ ಜತೆಯಲ್ಲೇ ನಗರದಲ್ಲಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆಯನ್ನು ಹೆಚ್ಚಿಸುವ ಅಗತ್ಯವಿದೆ’ ಎಂದಿದ್ದಾರೆ.
‘ನಗರದಲ್ಲಿ ಭವಿಷ್ಯದ ದಿನಗಳಲ್ಲಿ ವಿದ್ಯುತ್ ಚಾಲಿತ ಆಟೊ ರಿಕ್ಷಾಗಳು, ಕ್ಯಾಬ್ಗಳು, ಸರಕು ಆಟೊಗಳು ಹಾಗೂ ಘನತ್ಯಾಜ್ಯ ಸಂಗ್ರಹಣೆ ವಾಹನಗಳಿಗೆ ಮಾತ್ರ ಅನುಮತಿ ನೀಡುವುದು ಸೂಕ್ತ. ಇದಕ್ಕೆ ಪೂರಕವಾಗಿ ಇನ್ನು ಮುಂದೆ ನಗರ ಸಾರಿಗೆ ಬಸ್ಗಳನ್ನು ಖರೀದಿಸುವಾಗ ಸಹ ಎಲೆಕ್ಟ್ರಿಕ್ ಬಸ್ಗಳನ್ನು ಮಾತ್ರ ಸಾರಿಗೆ ಸೇವೆಗೆ ಬಳಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.