ADVERTISEMENT

ಬಾಂಗ್ಲಾದಿಂದ ಮಲೇಷ್ಯಾಕ್ಕೆ ಯುವತಿಯರ ಕಳ್ಳಸಾಗಣೆ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 11 ಜನವರಿ 2020, 21:50 IST
Last Updated 11 ಜನವರಿ 2020, 21:50 IST
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ   

ಬೆಂಗಳೂರು: ಆರ್ಥಿಕವಾಗಿ ಹಿಂದುಳಿದ ಯುವತಿಯರಿಗೆ ಉದ್ಯೋಗದ ಆಮಿಷವೊಡ್ಡಿ ಮಲೇಷ್ಯಾಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಬಾಂಗ್ಲಾದೇಶದಎಚ್‌.ಎಂ. ರಕೀಮ್ ಎಂಬಾತ, ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.‌

‘ಬಾಂಗ್ಲಾದೇಶದ 25 ವರ್ಷದ ಯುವತಿಯನ್ನು ಮಲೇಷ್ಯಾಕ್ಕೆ ಕರೆದೊಯ್ಯಲು ಆರೋಪಿ ನಿಲ್ದಾಣಕ್ಕೆ ಬಂದಿದ್ದ. ವಲಸೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದಾಗ ಆತನ ಕೃತ್ಯ ಬಯಲಾಯಿತು’ ಎಂದು ಪೊಲೀಸರು ಹೇಳಿದರು.

‘ವಲಸೆ ಅಧಿಕಾರಿಗಳೇ ಆರೋಪಿಯನ್ನು ವಶಕ್ಕೆ ಪಡೆದು ಠಾಣೆಗೆ ಒಪ್ಪಿಸಿದ್ದಾರೆ. ಆತನನ್ನು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ಆತನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಬೇಕಿದೆ’ ಎಂದು ತಿಳಿಸಿದರು.

ADVERTISEMENT

ಬೇರೊಬ್ಬರ ವೀಸಾದಡಿ ಕರೆತಂದಿದ್ದ: ‘ಬಾಂಗ್ಲಾದೇಶದ ಯುವತಿಯ ಪೋಷಕರು ಕೂಲಿ ಕೆಲಸ ಮಾಡುತ್ತಾರೆ. ಅವರ ಮನೆಗೆ ಹೋಗಿದ್ದ ಆರೋಪಿ ರಕೀಮ್, ಯುವತಿಗೆ ಕೆಲಸ ಕೊಡಿಸುವುದಾಗಿ ಹೇಳಿದ್ದ. ಪೋಷಕರ ಕೈಗೆ ಹಣ ಕೊಟ್ಟು ಯುವತಿಯನ್ನು ತನ್ನೊಂದಿಗೆ ಕಳುಹಿಸುವಂತೆ ಕೋರಿದ್ದ. ಅದಕ್ಕೆ ಪೋಷಕರು ಒಪ್ಪಿದ್ದರು’ ಎಂದು ಹೇಳಿದರು.

‘ಬಾಂಗ್ಲಾದೇಶದ ಬೇರೊಬ್ಬರ ವೀಸಾ ಬಳಸಿಕೊಂಡು ರಸ್ತೆ ಮೂಲಕ ಯುವತಿಯನ್ನು ಭಾರತಕ್ಕೆ ಕರೆತಂದಿದ್ದ. ಬೆಂಗಳೂರು ಹಾಗೂ ಗೋವಾದಲ್ಲಿ ಸುತ್ತಾಡಿಸಿದ್ದ. ಆಕೆಯನ್ನು ಮಲೇಷ್ಯಾಕ್ಕೆ ಕರೆದೊಯ್ಯಲು ಜ. 9ರಂದು ತಡರಾತ್ರಿ ವಿಮಾನ ನಿಲ್ದಾಣಕ್ಕೆ ಬಂದಿದ್ದ’ ಎಂದು ಪೊಲೀಸರು ತಿಳಿಸಿದರು.

‘ಬಾಂಗ್ಲಾದೇಶದ ಪಾಸ್‌ಪೋರ್ಟ್ ಹೊಂದಿರುವ ರಕೀಮ್, ಭಾರತದ ಮೂಲಕ ಹಲವು ಬಾರಿ ಮಲೇಷ್ಯಾಗೆ ಹೋಗಿ ಬಂದಿದ್ದಾನೆ. ಪ್ರತಿ ಬಾರಿಯೂ ಯುವತಿಯರನ್ನು ಕಳ್ಳ ಸಾಗಣೆ ಮಾಡಿರುವ ಅನುಮಾನವಿದೆ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗಲೇ ಮತ್ತಷ್ಟು ಮಾಹಿತಿ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.