ಬೆಂಗಳೂರು: ನಗರದ ಹಲವೆಡೆ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಏರ್‌ಟೆಲ್ ಮೊಬೈಲ್ ನೆಟ್‌ವರ್ಕ್ ಬಹುತೇಕ ಸ್ಥಗಿತವಾಗಿತ್ತು.
ಏರ್‌ಟೆಲ್ ಸಿಮ್ ಬಳಕೆದಾರರ ಮೊಬೈಲ್‌ನಲ್ಲಿ ‘ಸಿಮ್ ಕಾರ್ಡ್ ನಾಟ್ ಡಿಟೆಕ್ಟೆಡ್’, ‘ನೋ ಸಿಗ್ನಲ್’ ಎಂದು ತೋರಿಸುತ್ತಿತ್ತು. ಬಳಕೆದಾರರು ಕರೆ ಮಾಡಲು, ಸಂದೇಶ ಕಳುಹಿಸಲೂ ಪರದಾಡುವಂತಾಯಿತು. ಕೆಲವು ಮೊಬೈಲ್ ಫೋನ್‌ಗಳಲ್ಲಿ ನೆಟ್‌ವರ್ಕ್ ಇದೆಯೆಂದು ತೋರಿಸುತ್ತಿದ್ದರೂ, ಕರೆ ಹೋಗುತ್ತಿರಲಿಲ್ಲ.
ಮನೆಗಳಲ್ಲಿ ವೈಫೈ ಸಂಪರ್ಕ ಇದ್ದವರು, ಮೊಬೈಲ್‌ನಲ್ಲಿ ಇಂಟರ್‌ನೆಟ್ ಆಧಾರಿತ ಸೇವೆಗಳನ್ನು ಬಳಸಲು ಸಾಧ್ಯವಿತ್ತು. ಆದರೆ ‘ಸಿಮ್ ಕಾರ್ಡ್ ನಾಟ್ ಡಿಟೆಕ್ಟೆಡ್’ ಎಂದು ಬರುತ್ತಿದ್ದ ಕಾರಣ, ಯುಪಿಐ ಮೂಲಕ ಹಣ ವರ್ಗಾವಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ.
‘ಮೈಸೂರಿನಿಂದ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದು, ಅಲ್ಲಿಂದ ಆಟೊದಲ್ಲಿ ಮನೆಗೆ ಬಂದಿದ್ದೇನೆ. ಇಲ್ಲಿ, ನೆಟ್‌ವರ್ಕ್ ಇಲ್ಲದ ಕಾರಣ ಯುಪಿಐ ಮೂಲಕ ಹಣ ನೀಡಲು ಆಗುತ್ತಿಲ್ಲ. ನನ್ನ ಬಳಿ ನಗದು ಬೇರೆ ಇರಲಿಲ್ಲ. ಪಕ್ಕದ ಅಂಗಡಿಯವರ ಬಳಿ ಹಣ ಪಡೆದು, ಆಟೊದವರಿಗೆ ನೀಡಿದೆ’ ಎಂದು ತಾವು ಎದುರಿಸಿದ ಸಮಸ್ಯೆಯನ್ನು ಮೂಡಲಪಾಳ್ಯದ ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.
ನೆಟ್‌ವರ್ಕ್ ಇಲ್ಲದ ಕಾರಣ ಸ್ವಿಗ್ಗಿ, ಜೊಮ್ಯಾಟೊ, ಬ್ಲಿಂಕಿಟ್‌ನಂತಹ ಆ್ಯಪ್‌ಗಳಲ್ಲಿ ಆಹಾರ ಮತ್ತು ದಿನಸಿ ಬುಕ್ ಮಾಡಿದರೂ, ಪೂರೈಕೆಯಲ್ಲಿ ವ್ಯತ್ಯಯವಾಯಿತು. ‘ನನ್ನ ಮೊಬೈಲ್‌ನಲ್ಲಿ ನೆಟ್‌ವರ್ಕ್ ಬರುತ್ತಿರಲಿಲ್ಲ. ಮೊಬೈಲ್ ಕೆಟ್ಟುಹೋಗಿರಬಹುದು ಎಂದು ಸರ್ವಿಸ್ ಸೆಂಟರ್‌ಗೆ ತೆಗೆದುಕೊಂಡು ಹೋಗಿದ್ದೆ. ಆದರೆ, ನೆಟ್‌ವರ್ಕ್‌ನದೇ ಸಮಸ್ಯೆ ಎಂದು ಗೊತ್ತಾಯಿತು’ ಎಂದು ವಿಜಯನಗರದ ಸ್ವಿಗ್ಗಿ ರೈಡರ್ ಪ್ರಶಾಂತ್ ಹೇಳಿದರು.
ಈ ಬಗ್ಗೆ ವಿವರಣೆ ಪಡೆಯಲು ಏರ್‌ಟೆಲ್ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ, ಸಂಪರ್ಕ ಸಾಧ್ಯವಾಗಲಿಲ್ಲ. ಬದಲಿಗೆ, ‘ತಾಂತ್ರಿಕ ಕಾರಣದಿಂದ ನೆಟ್‌ವರ್ಕ್ ಸಮಸ್ಯೆ ಎದುರಾಗಿದೆ. ಕೆಲವೇ ಗಂಟೆಗಳಲ್ಲಿ ನೆಟ್‌ವರ್ಕ್ ಮರಳಲಿದೆ’ ಎಂದ ಸಂದೇಶ ಬರುತ್ತಿತ್ತು. ಮಧ್ಯಾಹ್ನ 2ರ ಹೊತ್ತಿಗೆ ನೆಟ್‌ವರ್ಕ್ ಸಹಜ ಸ್ಥಿತಿಗೆ ಮರಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.