ADVERTISEMENT

ಮಹಿಳೆ, ಮಕ್ಕಳ ರಕ್ಷಣೆಗೆ ‘ಅಕ್ಕ ಪಡೆ’; ನ.19ರಿಂದ ಕಾರ್ಯಾರಂಭ

ಕೆ.ಎಸ್.ಸುನಿಲ್
Published 16 ನವೆಂಬರ್ 2025, 23:30 IST
Last Updated 16 ನವೆಂಬರ್ 2025, 23:30 IST
ಅಕ್ಕಪಡೆ
ಅಕ್ಕಪಡೆ   

ಬೆಂಗಳೂರು: ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಹಾಗೂ ಸಕಾಲಿಕವಾಗಿ ಸಹಾಯ ಹಸ್ತ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಅಕ್ಕ ಪಡೆ’ ಆರಂಭಿಸಿದ್ದು, ಇದು ನವೆಂಬರ್ 19ರಿಂದ ಕಾರ್ಯಾರಂಭ ಮಾಡಲಿದೆ.

ಎರಡು ವರ್ಷಗಳ ಹಿಂದೆ ಬೀದರ್‌ನಲ್ಲಿ ಪ್ರಾಯೋಗಿಕವಾಗಿ ಅಕ್ಕ ಪಡೆ ಆರಂಭಿಸಲಾಗಿತ್ತು. ಅಲ್ಲಿ ಯಶಸ್ಸಿಯಾಗಿದ್ದರಿಂದ ಅಕ್ಕಪಡೆಯನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ. ಮೊದಲ ಹಂತದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು, ಉಡುಪಿ, ಮೈಸೂರು, ಮಂಗಳೂರು, ಬೆಳಗಾವಿ, ಬೆಂಗಳೂರು ಸೇರಿದಂತೆ ಆಯ್ದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿದೆ. ನಂತರ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗಲಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ಈ ಪಡೆ ಕಾರ್ಯನಿರ್ವಹಿಸಲಿದೆ. ಸಹಾನುಭೂತಿ ಮತ್ತು ಸಮುದಾಯ ಸೇವೆಯಲ್ಲಿ ಸ್ಪಂದಿಸುವ ಸುರಕ್ಷತಾ ಘಟಕವಾಗಿ ಮತ್ತು ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಅಕ್ಕ ಪಡೆಯು ಶಾಲಾ-ಕಾಲೇಜು, ಬಸ್ ನಿಲ್ದಾಣ, ಮಾಲ್‌ಗಳು, ಉದ್ಯಾನ, ದೇವಸ್ಥಾನ ಸೇರಿ ಜನದಟ್ಟಣೆ ಪ್ರದೇಶಗಳ ಬಳಿ ಗಸ್ತು ತಿರುಗಿ ಕಿಡಿಗೇಡಿಗಳ ಮೇಲೆ ನಿಗಾ ವಹಿಸಲಿದೆ. ಯುವತಿಯರು, ವಿದ್ಯಾರ್ಥಿಗಳನ್ನು ಚುಡಾಯಿಸುವ, ಕೀಟಲೆ ಮಾಡುವ ಮತ್ತು ಅಸಭ್ಯ ವರ್ತನೆ ತೋರುವ ಪುಂಡರನ್ನು ಹಿಡಿದು ತಕ್ಕ ಪಾಠ ಕಲಿಸಲಿದೆ. ನಗರ, ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿಯೂ ಈ ಪಡೆ ಕಾರ್ಯನಿರ್ವಹಿಸಲಿದ್ದು,  ಬೀದಿ ಕಾಮಣ್ಣರು, ಮಹಿಳಾ ಪೀಡಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.

ADVERTISEMENT

‘ತರಬೇತಿ ಪಡೆದ ಅಕ್ಕ ಪಡೆ ಸದಸ್ಯರನ್ನು ಹೆಣ್ಣು ಮಕ್ಕಳ ಹಾಸ್ಟೆಲ್, ಬಸ್– ರೈಲು ನಿಲ್ದಾಣ, ಪ್ರೇಕ್ಷಣಿಯ ಸ್ಥಳ ಸೇರಿ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸಲಾಗುವುದು. ಸಂಕಷ್ಟದಲ್ಲಿರುವ ಮಹಿಳೆಯರು ಮತ್ತು ಮಕ್ಕಳ ಕರೆಗಳಿಗೆ ತ್ವರಿತವಾಗಿ ಸ್ಪಂದಿಸುವುದು, ಸ್ವರಕ್ಷಣೆ ಕಾರ್ಯವಿಧಾನ ಬಗ್ಗೆ ತರಬೇತಿ ನೀಡುವುದು ಹಾಗೂ ಸಂಚಾರ ನಿಯಮ ಕುರಿತು ಜಾಗೃತಿ ಮೂಡಿಸಲಿದೆ. ಹೊಯ್ಸಳ ವಾಹನದ ಮಾದರಿಯಲ್ಲಿ ಪಡೆ ರಸ್ತೆಗಿಳಿಯಲಿದ್ದು, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆದು, ಕಾನೂನು ರಕ್ಷಣೆಯೊಂದಿಗೆ ಭಯಮುಕ್ತ ವಾತಾವರಣ ಸೃಷ್ಟಿಸಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

‘ರಾಜ್ಯದ ಯಾವುದೇ ಭಾಗದಿಂದ ಕರೆ ಮಾಡಿದರೂ ಅಗತ್ಯವಿರುವ ನೆರವು ನೀಡಲಾಗುತ್ತದೆ. ಸಹಾಯವಾಣಿ ಮೂಲಕ ತುರ್ತು ನೆರವು ನೀಡಲಾಗುತ್ತದೆ. ದೂರುಗಳು ಬಂದರೆ ಅಕ್ಕ ಪಡೆ ತಕ್ಷಣ ಕಾರ್ಯಾಚರಣೆಗೆ ಇಳಿದು ಬುದ್ಧಿವಾದ ಹೇಳಲಿದೆ. ಒಂದು ವೇಳೆ ಪ್ರಕರಣ ಗಂಭೀರವಾಗಿದ್ದರೆ ತಪ್ಪಿತಸ್ಥರನ್ನು ಠಾಣೆಗೆ ಒಪ್ಪಿಸಲಾಗುತ್ತದೆ. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು, ಬಾಲ್ಯವಿವಾಹ, ಕಳ್ಳಸಾಗಣೆ, ಸಹಾಯವಾಣಿ 1098, 181, 112, ಗುಡ್ ಟಚ್‌– ಬ್ಯಾಡ್ ಟಚ್‌ ಸೇರಿ ಕಾನೂನು ಬಗ್ಗೆ ಜಾಗೃತಿ ಮೂಡಿಸಲಿದೆ. ರಾಜ್ಯ ಸರ್ಕಾರದಿಂದ ₹110 ಕೋಟಿ ಅನುದಾನ ಕೋರಲಾಗಿದೆ. ನಿರ್ಭಯ ಯೋಜನೆಯಡಿ ಅನುದಾನ ನೀಡುವಂತೆ ಕೇಂದ್ರಕ್ಕೂ ಮನವಿ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಕ್ರಾಂತಿಕಾರಿ ಯೋಜನೆ: ಲಕ್ಷ್ಮೀ ಹೆಬ್ಬಾಳಕರ

‘ಮಹಿಳೆಯರು ಹಾಗೂ ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಇದೊಂದು ಕ್ರಾಂತಿಕಾರಿ ಯೋಜನೆಯಾಗಿದೆ. ಶಾಲಾ‌- ಕಾಲೇಜು ಹಾಸ್ಟೆಲ್ ಮಾಲ್‌ಗಳು ಜನನಿಬಿಡ ಪ್ರದೇಶಗಳಲ್ಲಿ ಅಕ್ಕ ಪಡೆ ವಾಹನ ಗಸ್ತು ತಿರುಗಲಿದೆ. ಮನೆಯಲ್ಲಿ ನೆರೆ ಹೊರೆಯವರಿಂದ ತೊಂದರೆ ಅನುಭವಿಸುವ ಹೆಣ್ಣುಮಕ್ಕಳು ಸಹಾಯವಾಣಿ ಮೂಲಕ ಅಕ್ಕ ಪಡೆಯನ್ನು ಸಂಪರ್ಕಿಸಬಹುದು. ಪೊಲೀಸ್ ಇಲಾಖೆ ಹಾಗೂ ಎನ್‌ಸಿಸಿ ಸಹಯೋಗದಲ್ಲಿ ಈ ಪಡೆ ಕಾರ್ಯ ನಿರ್ವಹಿಸಲಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮಹಿಳಾ ಕೆಡೆಟ್–ಪೊಲೀಸರ ತಂಡ

ಎನ್‌ಸಿಸಿ ‘ಸಿ’ ಪ್ರಮಾಣ ಪತ್ರ ಹೊಂದಿರುವ 35–45 ವರ್ಷದೊಳಗಿನ ಮಹಿಳಾ ಕೆಡೆಟ್‌ಗಳು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿ ಪ್ರತಿ ತಂಡದಲ್ಲಿ 6ರಿಂದ 10 ಮಂದಿ ಇರುತ್ತಾರೆ. ಪಾಳಿ ಪ್ರಕಾರ (ಬೆಳಿಗ್ಗೆ 7ರಿಂದ 2 ಮಧ್ಯಾಹ್ನ 2ರಿಂದ ರಾತ್ರಿ 8) ತಂಡ ಕಾರ್ಯನಿರ್ವಹಿಸಲಿದೆ. ಈ ಪಡೆಯ ಸಿಬ್ಬಂದಿಗೆ ಪೊಲೀಸ್ ಕಮಿಷನರ್ ಜಿಲ್ಲಾ ಎಸ್‌ಪಿ ಮಾರ್ಗದರ್ಶನದಲ್ಲಿಅಗತ್ಯ ತರಬೇತಿ ನೀಡಲಾಗುತ್ತದೆ. ಮಹಿಳಾ ಕೆಡೆಟ್‌ಗಳಿಗೆ ಪ್ರತಿ ತಿಂಗಳು ಗೌರವಧನ ಕಮಾಂಡೊ ಪಡೆಯ ವಸ್ತ್ರ ನೀಡಲು ನಿರ್ಧರಿಸಲಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದರು. 

.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.