ADVERTISEMENT

ದೇವರಕೆರೆಯಲ್ಲಿ ಸಕ್ಕರ್‌ಮೌತ್‌ ಮೀನು: ಆತಂಕ ತಂದಿರುವ ’ಅಮೆಜಾನ್‌ ಅತಿಥಿ’

ದೇವರಕೆರೆಯಲ್ಲಿ ಸಕ್ಕರ್‌ಮೌತ್‌ ಮೀನು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2021, 20:02 IST
Last Updated 7 ಫೆಬ್ರುವರಿ 2021, 20:02 IST
ದೇವರ ಕೆರೆಯಲ್ಲಿ ಕಂಡು ಬಂದ ಸಕ್ಕರ್‌ಮೌತ್‌ ಮೀನು
ದೇವರ ಕೆರೆಯಲ್ಲಿ ಕಂಡು ಬಂದ ಸಕ್ಕರ್‌ಮೌತ್‌ ಮೀನು   

ಬೆಂಗಳೂರು: ಇಸ್ರೊ ಬಡಾವಣೆಯ ದೇವರಕೆರೆಯಲ್ಲಿ ‘ಸಕ್ಕರ್‌ ಮೌತ್‌’ ಎಂಬ ವಿದೇಶಿ ತಳಿಯ ಮೀನುಗಳು ಪತ್ತೆಯಾಗಿರುವುದು ಜೀವವೈವಿಧ್ಯ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವ ಪರಿಸರ ಕಾರ್ಯಕರ್ತರ ಆತಂಕಕ್ಕೆ ಕಾರಣವಾಗಿದೆ

ಈ ಕೆರೆಯನ್ನು ಬಿಬಿಎಂಪಿ ಪುನರುಜ್ಜೀವನಗೊಳಿಸುತ್ತಿದೆ. ಕಾಮಗಾರಿಗಾಗಿ ಕೆರೆಯನ್ನು ಇತ್ತೀಚೆಗೆ ಸಂಪೂರ್ಣ ಖಾಲಿ ಮಾಡಲಾಗಿತ್ತು. ನೀರು ಬತ್ತುತ್ತಿದ್ದಂತೆಯೇ ಇದರಲ್ಲಿ ಭಾರಿ ಸಂಖ್ಯೆಯಲ್ಲಿ ಮೀನುಗಳು ಕಂಡು ಬಂದಿದೆ.

‘ಕೆರೆಯ ನೀರು ಸಂಪೂರ್ಣ ಬತ್ತುತ್ತಿದ್ದಂತೆಯೇ ಮೀನನ್ನು ತೆಗೆದುಕೊಂಡು ಹೋಗಲು ಕೆಲವರು ಬಂದರು. ಆದರೆ ಈ ಮೀನು ತಿನ್ನಲಾಗದು ಎಂಬ ಕಾರಣಕ್ಕೆ ಬಿಟ್ಟು ಹೋದರು. ನಾವೂ ಈ ಮೀನುಗಳನ್ನು ಉಳಿಸಿಕೊಳ್ಳಲು ಪ್ರಯತ್ನಪಟ್ಟಿದ್ದೆವು. ತಜ್ಞರು ಬಂದು ಮಾಹಿತಿ ನೀಡಿದ ಬಳಿಕವಷ್ಟೇ ಈ ಮೀನುಗಳು ಅಪಾಯಕಾರಿ ಎಂಬುದು ಅರಿವಾಯಿತು’ ಎಂದು ದೇವರ ಕೆರೆ ಸಂರಕ್ಷಣಾ ವೇದಿಕೆಯ ಹರೀಶ್‌ ಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಹೈಪೋಸ್ಟೊಮಸ್‌ ಪ್ಲೆಕೊಸ್ಟೊಮಸ್‌ (Hypostomus plecostomus) ಎಂಬ ವೈಜ್ಞಾನಿಕ ಹೆಸರನ್ನು ಹೊಂದಿರುವ ಸಕ್ಕರ್‌ಮೌತ್‌ ಮೀನುಗಳು ದಕ್ಷಿಣ ಅಮೆರಿಕಾದ ಅಮೆಜಾನ್‌ ಮೂಲದವು. ಇವುಗಳನ್ನು ‘ಆರ್ಮೋರ್ಡ್‌ ಕ್ಯಾಟ್‌ಫಿಶ್‌’ ಎಂದೂ ಕರೆಯುತ್ತಾರೆ. ಇವು 16ರಿಂದ 20 ಇಂಚುಗಳಷ್ಟು ಉದ್ದಕ್ಕೂ ಬೆಳೆಯುತ್ತವೆ.ಇವುಗಳು ಮರಿಗಳಿದ್ದಾಗ ಮಾತ್ರ ಕೊಕ್ಕರೆ ಅಥವಾ ನೀರುಕಾಗೆಗಳು ತಿನ್ನಬಲ್ಲವು. ಬೆಳೆದಂತೆ ಇವುಗಳ ಚರ್ಮ ಕಠಿಣವಾಗುವುದರಿಂದ ಬಲಿತ ಮೀನುಗಳನ್ನು ಹಕ್ಕಿಗಳಾಗಲೀ ಬೇರೆ ಮೀನುಗಳಾಗಲೀ ತಿನ್ನಲಾಗದು. ಇವು ಒಮ್ಮೆಲೆ ನೂರಾರು ಮೊಟ್ಟೆಗಳನ್ನಿಟ್ಟು ಮರಿಗಳನ್ನು ಮಾಡುತ್ತವೆ. ಹಾಗಾಗಿ ಇವುಗಳ ಸಂತತಿಯೂ ಬಲುಬೇಗ ವೃದ್ಧಿಸುತ್ತದೆ’ ಎನ್ನುತ್ತಾರೆ ಮೀನಿನ ಪರಿಣಿತರಾದ ಆರ್‌.ದೀಪಕ್‌.

‘ಆಫ್ರಿಕಾದ ಕ್ಯಾಟ್‌ ಫಿಷ್‌ (ಆನೆ ಮೀನು) ಹಾಗೂ ಟೆಲಾಪಿಯಾ (ಜುಲೇಬಿ ಮೀನು) ಮೀನುಗಳಂತೆಯೇ ತೆರದಲ್ಲಿ ಸಕ್ಕರ್‌ಫಿಶ್‌ ಕೂಡಾ ಆಕ್ರಮಣಕಾರಿ. ಇವು ತಾವು ಬದುಕುಳಿಯಲು ಇತರ ಮೀನುಗಳನ್ನು ತಿನ್ನುವುದಷ್ಟೇ ಅಲ್ಲ, ಪ್ರತಿಕೂಲ ಪರಿಸ್ಥಿತಿ ಎದುರಾದರೆ ಕೆರೆಯ ಗಿಡಗಂಟಿಗಳನ್ನೂ ತಿಂದು ತೇಗಬಲ್ಲವು. ಇವುಗಳ ಈ ಆಕ್ರಮಣಕಾರಿ ಪ್ರವೃತ್ತಿ ಇಡೀ ಕೆರೆಯ ಜೀವಿ–ಪರಿಸರ ವ್ಯವಸ್ಥೆಯನ್ನೇ ಹದಗೆಡಿಸಬಲ್ಲುದು. ಇವುಗಳಿರುವ ಕೆರೆಗಳಲ್ಲಿ ಬೇರೆ ಮೀನುಗಳೂ ಕ್ರಮೇಣ ನಶಿಸುತ್ತವೆ’ ಎಂದು ಅವರು ವಿವರಿಸಿದರು.

‘ದೇವರ ಕೆರೆಯಲ್ಲಿ ಮೀನುಗಳು ಸತ್ತು ಬಿದ್ದಿರುವ ಚಿತ್ರ ನೋಡಿ ಇವು ಕ್ಯಾಟ್‌ಫಿಶ್‌ (ಆನೆ ಮೀನು) ಇರಬಹುದು ಎಂದೇ ಭಾವಿಸಿದ್ದೇ. ಇಲ್ಲಿಗೆ ಬಂದು ಕೂಲಂಕಷವಾಗಿ ಗಮನಿಸಿದ ಬಳಿಕವಷ್ಟೇ ಇವು ಸಕ್ಕರ್‌ಮೌತ್‌ ಮೀನುಗಳೆಂಬುದು ತಿಳಿಯಿತು. ಈ ಮೀನು ಯಾವುದೇ ಕೆರೆಯನ್ನು ಸೇರಿಕೊಂಡರೂ ಅಲ್ಲಿನ ಪರಿಸರ ವ್ಯವಸ್ಥೆಯ ವಿನಾಶ ಕಟ್ಟಿಟ್ಟ ಬುತ್ತಿ. ಈ ಮೀನುಗಳನ್ನು ಹಕ್ಕಿಗಳೂ ತಿನ್ನುವುದಿಲ್ಲ. ನಾಯಿಗಳೂ ಮೂಸುವುದಿಲ್ಲ. ಹಾಗಾಗಿ ಕೆರೆಯಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ಮೀನು ಸತ್ತು ಬಿದ್ದಿದ್ದರೂ ಗಿಡುಗ, ಹದ್ದು ಮೊದಲಾದ ಹಕ್ಕಿಗಳು ಕೆರೆಯ ಬಳಿ ಇಲ್ಲಿ ಕಾಣಿಸಿಕೊಂಡಿಲ್ಲ’ ಎಂದು ಬಿಬಿಎಂಪಿಯ ಜೀವವೈವಿಧ್ಯ ಸಮಿತಿಯ ಸದಸ್ಯ ವಿಜಯ್‌ ನಿಶಾಂತ್‌ ತಿಳಿಸಿದರು.

‘ಸುಪ್ತಾವಸ್ಥೆಯಲ್ಲಿ ವರ್ಷಗಟ್ಟಲೆ ಬದುಕಬಲ್ಲವು’

‘ಈ ಮೀನುಗಳ ಸುಪ್ತಾವಸ್ಥೆಯಲ್ಲಿ ವರ್ಷಗಟ್ಟಲೆ ಬದುಕುಳಿಯಬಲ್ಲವು. ನೀರಿನ ಮೇಲೂ ಉಸಿರಾಡುವ ಸಾಮರ್ಥ್ಯ ಹೊಂದಿರುವ ಈ ಮೀನುಗಳು ತೆವಳಿಕೊಂಡು ಹೋಗಿ ಬೇರೆ ಕೆರೆಕಟ್ಟೆಗಳನ್ನು ಸೇರಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಸ್ವಲ್ಪವೇ ನೀರು ಅಥವಾ ನೀರು ಸಿಕ್ಕರೂ ಇವು ಬದುಕುಳಿಯುತ್ತವೆ. ಮೋರಿಯಲ್ಲಿ ಹರಿಯುವ ಕೊಳಚೆಯಲ್ಲೂ ಜೀವಿಸಬಲ್ಲುವು. ಹಾಗಾಗಿ ಈ ಮೀನುಗಳ ಹಾವಳಿ ತಡೆಯುವುದು ತೆಲನೋವಿನ ವಿಚಾರ’ ಎನ್ನುತ್ತಾರೆ ದೀಪಕ್‌.

‘ಕೆರೆಯ ನೀರನ್ನು ಸಂಪೂರ್ಣ ಖಾಲಿ ಮಾಡಿ ಈ ಮೀನುಗಳನ್ನು ನಾಶಪಡಿಸಲಾಗಿದೆ. ಸದ್ಯಕ್ಕೆ ಈ ಕೆರೆಯಲ್ಲಿ ಈ ಮೀನು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಆದರೆ, ಈ ಜಾತಿಯ ಮೀನು ಬೇರೆ ಕೆರೆಗಳನ್ನು ಈಗಾಗಲೇ ಸೇರಿಕೊಂಡಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ’ ಎಂದು ಅವರು ತಿಳಿಸಿದರು.

‘ಸಕ್ಕರ್‌ಫಿಶ್‌ ಕಂಡರೆ ಮಾಹಿತಿ ನೀಡಿ’

‘ನಗರದ ಕೆರೆಗಳಲ್ಲಿ ಈ ಜಾತಿಯ ಮೀನುಗಳು ಕಂಡು ಬಂದರೆ ಕೆರೆ ವಿಭಾಗದ ಅಧಿಕಾರಿಗಳ ಗಮನಕ್ಕೆ ತನ್ನಿ. ಅಥವಾ ನಮ್ಮ ಗಮನಕ್ಕೆ ತನ್ನಿ’ ಎಂದು ವಿಜಯ್‌ ನಿಶಾಂತ್‌ ಕೋರಿದರು.

‘ಈ ಕೆರೆಯ ಪುನರುಜ್ಜೀವನ ಕಾರ್ಯ ಪೂರ್ಣಗೊಂಡ ಬಳಿಕವೂ ಕನಿಷ್ಠ ಒಂದು ವರ್ಷ ಕಾಲ ಈ ಮೀನು ಕಾಣಿಸಿಕೊಳ್ಳುತ್ತದೆಯೇ ಎಂಬ ಬಗ್ಗೆ ನಿಗಾ ಇಡುವಂತೆ ಸ್ಥಳೀಯರಿಗೆ ತಿಳಿಸಿದ್ದೇನೆ’ ಎಂದರು.

‘ಕೆರೆಗೆ ಸೇರಿಕೊಂಡಿದ್ದು ಹೇಗೆ?’

‘ಸಕ್ಕರ್‌ಮೌತ್‌ ಜಾತಿಯ ಮೀನುಗಳನ್ನು ಅಕ್ವೇರಿಯಂಗಳಲ್ಲೂ ಸಾಕುತ್ತಾರೆ. ಇವು ಅಕ್ವೇರಿಯಂಗಳನ್ನು ಸ್ವಚ್ಛವಾಗಿಡುತ್ತವೆ. ಇವುಗಳ ಸಂತಾನೋತ್ಪತ್ತಿ ಮಾಡುವ ಕೇಂದ್ರಗಳು ಚೆನ್ನೈ, ಕೊಲ್ಕತ್ತಗಳಲ್ಲಿವೆ. ಅಕ್ವೇರಿಯಂನಲ್ಲಿ ಸಾಕಿರುವ ಮೀನನ್ನು ಯಾರಾದರೂ ತಂದು ಕೆರೆಯಲ್ಲಿ ಬಿಟ್ಟಿರುವ ಸಾಧ್ಯತೆ ಇದೆ’ ಎನ್ನುತ್ತಾರೆ ಸ್ವತಃ ಅಕ್ವೇರಿಯಂ ತಜ್ಞರಾಗಿರುವ ದೀಪಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.