ಬೆಂಗಳೂರು: ‘ನಮ್ಮ ಮೆಟ್ರೊ’ 10 ನಿಲ್ದಾಣಗಳಲ್ಲಿ ‘ಅಮೂಲ್ ಕಿಯೊಸ್ಕ್’ ಮಳಿಗೆ ಆರಂಭಿಸಲು ಬಿಎಂಆರ್‌ಸಿಎಲ್ ಮತ್ತು ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ ಒಪ್ಪಂದ ಮಾಡಿಕೊಂಡಿವೆ. ನಂದಿನಿ ಇರುವಾಗ ಅಮೂಲ್‌ಗೆ ಅವಕಾಶ ನೀಡಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಬೈಯಪ್ಪನಹಳ್ಳಿ, ಟ್ರಿನಿಟಿ, ಸರ್. ಎಂ ವಿಶ್ವೇಶ್ವರಯ್ಯ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್, ನ್ಯಾಷನಲ್ ಕಾಲೇಜು, ಜಯನಗರ ಮತ್ತು ಬನಶಂಕರಿ ನಿಲ್ದಾಣಗಳಲ್ಲಿ ‘ಅಮೂಲ್ ಕಿಯೋಸ್ಕ್’ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅದರಂತೆ ಬೈಯಪ್ಪನಹಳ್ಳಿ ಮತ್ತು ಬೆನ್ನಿಗಾನಹಳ್ಳಿಯಲ್ಲಿ ಮಳಿಗೆ ಆರಂಭವಾಗಿದೆ. ಉಳಿದ 8 ನಿಲ್ದಾಣಗಳಲ್ಲಿ ಆರಂಭಿಸುವ ಪ್ರಕ್ರಿಯೆ ನಡೆಯುತ್ತಿದೆ.
ಅಮೂಲ್‌ನ ಡೇರಿಯ ವಿವಿಧ ಉತ್ಪನ್ನಗಳನ್ನು ಈ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಚಾಕೊಲೇಟ್–ಆಲೂಗಡ್ಡೆ ಆಧಾರಿತ ತಿಂಡಿಗಳು, ಐಸ್‌ಕ್ರೀಂ, ಸಾವಯವ ಮತ್ತು ಕರಿದ ಉತ್ಪನ್ನಗಳು ಇದರಲ್ಲಿ ಸೇರಿವೆ. ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿವಿಧ ಉಪಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್ ತನ್ನ ಮಾಸಿಕ ಸುದ್ದಿಪತ್ರಿಕೆ ‘ಮೆಟ್ರೊ ಇನ್‌ಸೈಟ್’ನಲ್ಲಿ ತಿಳಿಸಿತ್ತು.
ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು. ‘ನಮ್ಮ ನಂದಿನಿ ಪದಾರ್ಥಗಳನ್ನು ಬಿಟ್ಟು ಹೊರ ರಾಜ್ಯದ ಅಮೂಲ್‌ಗೆ ಅವಕಾಶ ನೀಡಲಾಗಿದೆ. ಇದರ ವಿರುದ್ಧ ಹೋರಾಟ ಮಾಡುವವರು ಯಾರೂ ಇಲ್ವ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ‘ನಂದಿನಿ ನಮ್ಮ ಹೆಮ್ಮೆ’ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ‘ನಂದಿನಿ ನಮ್ಮ ಬ್ರ್ಯಾಂಡ್. ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ’ ಎಂದು ಮತ್ತೊಬ್ಬರು ಅಭಿಮಾನ ವ್ಯಕ್ತಪಡಿಸಿದ್ದಾರೆ. ‘ನಂದಿನಿ ಅಮೂಲ್‌ಗೆ ಮಾರಿ ರೈತರಿಗೆ ಮೋಸ ಮಾಡುತ್ತಾರೆ ಎಂದು ಬಿಜೆಪಿ ಆಡಳಿತದ ಸಮಯದಲ್ಲಿ ಗಲಾಟೆ ಮಾಡಿದವರೇ ಈಗ ಅಮೂಲ್‌ಗೆ ಶರಣಾಗಿದ್ದಾರೆ’ ಎಂದು ಕುಟುಕಿದ್ದಾರೆ.
‘ಹೀಗೆಯೇ ಗುಜರಾತಿಗಳು ತಮ್ಮ ಉತ್ಪನ್ನಗಳನ್ನು ನಮ್ಮ ಮೇಲೆ ಹೇರಿ ಮಾರುಕಟ್ಟೆಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ’ ಎಂದು ಮತ್ತೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.