
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ ನಡೆಸಿದರು (ಕಡತದಿಂದ)
–ಪ್ರಜಾವಾಣಿ ಚಿತ್ರ
ಬೆಂಗಳೂರು: ನಿವೃತ್ತಿಯಾಗಿರುವ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಗ್ರಾಚ್ಯುಯಿಟಿ ನೀಡುವಂತೆ ಆಗ್ರಹಿಸಿ ನವೆಂಬರ್ 6ರಂದು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ತಿಳಿಸಿದೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಮುಖಂಡರಾದ ಜಿ.ಆರ್. ಶಿವಶಂಕರ್, ಬಿ.ಅಮ್ಜದ್, ಬಿ. ನಾಗರತ್ನಮ್ಮ, ಎಂ. ಜಯಮ್ಮ, ಕೆ.ಸೋಮಶೇಖರ್ ಯಾದಗಿರಿ, ಎಂ. ಉಮಾದೇವಿ, ‘ಸುಮಾರು 20 ಸಾವಿರ ವಯೋವೃದ್ಧರು ಯಾವುದೇ ಆರ್ಥಿಕ ಆಸರೆ ಇಲ್ಲದೇ ಜೀವನ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಗ್ರಾಚ್ಯುಯಿಟಿ ನೀಡಬೇಕು. 2023ರಿಂದ ಗ್ರಾಚ್ಯುಟಿ ಜಾರಿಗೊಳಿಸಿ ಕೈ ತೊಳೆದುಕೊಳ್ಳುವ ಸರ್ಕಾರದ ಕ್ರಮ ಸರಿಯಲ್ಲ’ ಎಂದು ತಿಳಿಸಿದರು.
‘2011–12ನೇ ಸಾಲಿನ ಬಳಿಕ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪೈಕಿ ಈಗಾಗಲೇ ಬಹಳಷ್ಟು ಜನ ಮೃತಪಟ್ಟಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸಂಬಳ ಹಾಗೂ ಇತರೆ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಕನಿಷ್ಠ ವೇತನಕ್ಕಿಂತ ಕಡಿಮೆ ಗೌರವ ಧನದಲ್ಲಿ ದುಡಿಸಿಕೊಳ್ಳುತ್ತಿದ್ದಾರೆ’ ಎಂದು ದೂರಿದರು.