ADVERTISEMENT

ಅಂಗನವಾಡಿ ನೇಮಕಾತಿ: ಸರ್ಕಾರಕ್ಕೆ ತುರ್ತು ನೋಟಿಸ್ ನೀಡಿದ ಹೈಕೋರ್ಟ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 15:51 IST
Last Updated 5 ನವೆಂಬರ್ 2025, 15:51 IST
   

ಬೆಂಗಳೂರು: 20 ಅಂಗನವಾಡಿ ಕಾರ್ಯಕರ್ತೆಯರ ನೇಮಕ ರದ್ದುಗೊಳಿಸುವಂತೆ ಕೋರಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ತುರ್ತು ನೋಟಿಸ್‌ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

‘ನಿಯಮಗಳನ್ನು ಉಲ್ಲಂಘಿಸಿ ಮಾಡಲಾಗಿರುವ ಈ ನೇಮಕಾತಿ ಆದೇಶ ರದ್ದುಗೊಳಿಸಬೇಕು’ ಎಂದು ಕೋರಿ ರಾಯಚೂರಿನ ಕವಿತಾಳದ ರಾಜೇಶ್ವರಿ ಸೇರಿದಂತೆ ಒಟ್ಟು ಆರು ಜನರು ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಶೋಕ್‌ ಎಸ್. ಕಿಣಗಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಕಾರ್ಯದರ್ಶಿ, ರಾಯಚೂರು ಜಿಲ್ಲಾಧಿಕಾರಿ ಹಾಗೂ ನೇಮಕಗೊಂಡಿರುವ ವಿವಿಧ ಜಿಲ್ಲೆಗಳ 20 ಕಾರ್ಯಕರ್ತೆಯರೂ ಸೇರಿದಂತೆ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ ವಿಚಾರಣೆ ಮುಂದೂಡಿದೆ.

ADVERTISEMENT

ಅರ್ಜಿಯಲ್ಲಿ ಏನಿದೆ?: ‘ರಾಯಚೂರು ಜಿಲ್ಲೆಯನ್ನು ಆಶೋತ್ತರ ಜಿಲ್ಲೆ ಎಂದು ಪರಿಗಣಿಸಿದ್ದ ಕೇಂದ್ರ ಸರ್ಕಾರ 2018ರ ಮಾರ್ಚ್ 14ರಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ನೇಮಕಾತಿ ಅಧಿಕಾರವನ್ನು ಅಯಾ ಜಿಲ್ಲಾಧಿಕಾರಿಗಳಿಗೆ ನೀಡಿ ಆದೇಶ ಹೊರಡಿಸಿದೆ. ಅದರಂತೆ ಜಿಲ್ಲಾಧಿಕಾರಿಗಳು ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಅಥವಾ ಮೇಲ್ವಿಚಾರಕರನ್ನು ನೇಮಕ ಮಾಡಬೇಕಾಗಿತ್ತು. ಆದರೆ, ಈ ನಿಯಮವನ್ನು ಉಲ್ಲಂಘಿಸಲಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

‘ಕೆಪಿಎಸ್‌ಸಿ ಮೂಲಕ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಕ ಮಾಡಿರುವ ಸರ್ಕಾರ ಕಾನೂನು ಉಲ್ಲಂಘಿಸಿದ್ದು ನೇಮಕಾತಿ ಪಟ್ಟಿಯನ್ನೇ ರದ್ದು ಮಾಡಬೇಕು. ಪುನಃ ಹೊಸದಾಗಿ ನೇಮಕಾತಿ ಪ್ರಕ್ರಿಯೆ ನಡೆಸುವಂತೆ ಕೋರಿ 2025ರ ಆಗಸ್ಟ್ 2ರಂದು ನೀಡಿರುವ ನಮ್ಮ ಮನವಿ ಪರಿಗಣಿಸಲು ಆದೇಶಿಸಬೇಕು’ ಎಂದು ಕೋರಿದ್ದಾರೆ.