ADVERTISEMENT

ಅಂಗನವಾಡಿ ನೌಕರರ ಸಂಘ: ಬೇಡಿಕೆ ಈಡೇರಿಕೆಗೆ 48 ಗಂಟೆ ಗಡುವು

ಹೋರಾಟ ತೀವ್ರಗೊಳಿಸಲು ಅಂಗನವಾಡಿ ನೌಕರರ ಸಂಘ ನಿರ್ಧಾರ: ಫೆ.2ರಂದು ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 19:15 IST
Last Updated 30 ಜನವರಿ 2023, 19:15 IST
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮನವಿ ಸ್ವೀಕರಿಸಿ, ಸಚಿವ ಹಾಲಪ್ಪ ಬಸಪ್ಪ ಆಚಾರ್ ಮಾತನಾಡಿದರು    – ಪ್ರಜಾವಾಣಿ ಚಿತ್ರ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮನವಿ ಸ್ವೀಕರಿಸಿ, ಸಚಿವ ಹಾಲಪ್ಪ ಬಸಪ್ಪ ಆಚಾರ್ ಮಾತನಾಡಿದರು    – ಪ್ರಜಾವಾಣಿ ಚಿತ್ರ   

ಬೆಂಗಳೂರು: ಗ್ರಾಚ್ಯುಟಿ ವಿತರಣೆ ಹಾಗೂ ಶಿಕ್ಷಕರೆಂದು ಪರಿಗಣಿಸುವಂತೆ ಆಗ್ರಹಿಸಿ, ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಅಂಗನವಾಡಿ ಕಾರ್ಯಕರ್ತೆಯರು‌, ಸಹಾಯಕಿಯರು ತೀವ್ರಗೊಳಿಸಲು ನಿರ್ಧರಿಸಿದ್ದಾರೆ.

‘ಸೋಮವಾರಕ್ಕೆ ಪ್ರತಿಭಟನೆ 8 ದಿನ ಪೂರೈಸಿದೆ. ಆದರೂ, ಸರ್ಕಾರದಿಂದ ಸ್ಪಂದನೆ ದೊರೆತಿಲ್ಲ. 48 ಗಂಟೆಗಳ ಒಳಗಾಗಿ ಅಧಿಕೃತ ಆದೇಶ ನೀಡಬೇಕು. ಇಲ್ಲದಿದ್ದರೆ ಫೆ.2ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ. ಮುಂದಾಗುವ ಅನಾಹುತಗಳಿಗೆ ರಾಜ್ಯ ಸರ್ಕಾರ ಹೊಣೆ’ ಎಂದು ನೌಕರರ ಸಂಘದ ರಾಜ್ಯ ಅಧ್ಯಕ್ಷೆ ಎಸ್‌.ವರಲಕ್ಷ್ಮಿ ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಸಿದರು.

‘ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಸಚಿವ ಹಾಲಪ್ಪ ಬಸಪ್ಪ ಆಚಾರ್‌ ನಿಮ್ಮ ಪರವಾಗಿ ಇದ್ದೇನೆ. ಪರಿಶೀಲಿಸುತ್ತೇನೆ
ಎಂದು ಹೇಳಿದ್ದು ಬಿಟ್ಟರೆ ಅಧಿಕೃತ ಆದೇಶದ ಬಗ್ಗೆ ಭರವಸೆ ನೀಡಲಿಲ್ಲ’ ಎಂದು ಆಕ್ರೋಶ ಹೊರಹಾಕಿದರು.

ADVERTISEMENT

‘ಚಳಿ, ಬಿಸಿಲು ನಡುವೆ ಮಹಿಳೆಯರು ರಸ್ತೆಗೆ ಬಂದುಹೋರಾಡುತ್ತಿದ್ದಾರೆ. ಇದನ್ನು ಹತ್ತಿಕ್ಕುವ ಕೆಲಸಗಳು ನಡೆಯುತ್ತಿವೆ’ ಎಂದರು

‘ಹೊಸ ಶಿಕ್ಷಣ ನೀತಿಯಂತೆ 3ರಿಂದ 6 ವರ್ಷದ ಮಕ್ಕಳಿಗೆ ಅಡಿಪಾಯ ಶಿಕ್ಷಣಕ್ಕೆ ಮಹತ್ವ ನೀಡಿದೆ. ಈ ಮಕ್ಕಳಿಗೆ ಅಂಗನವಾಡಿಯಲ್ಲೇ ಶಿಕ್ಷಣ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರನ್ನು ಶಿಕ್ಷಕರೆಂದು ಪರಿಗಣಿಸಬೇಕು’ ಎಂದು ಕೋರಿದರು.

‘ಸುಪ್ರೀಂ ಕೋರ್ಟ್‌ನಲ್ಲಿ 16 ವರ್ಷಗಳ ನಿರಂತರ ಹೋರಾಟದ ಫಲವಾಗಿ ಗ್ರಾಚ್ಯುಟಿ ಹಕ್ಕು ಸಿಕ್ಕಿದೆ. ಈ ಹಕ್ಕನ್ನು ಪಡೆಯಬೇಕೆಂಬ ಉದ್ದೇಶದಿಂದ ಪ್ರತಿಭಟನೆ ನಡೆಸಲಾಗುತ್ತಿದೆ. 2011ರಿಂದ 30 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಿವೃತ್ತರಾಗಿದ್ದಾರೆ. ಅವರಿಗೆ ಗ್ರಾಚ್ಯುಟಿ ನೀಡಿದರೆ, ₹250 ಕೋಟಿ ಬೇಕಿದೆ. ಅದನ್ನು ನೀಡಲು ಸರ್ಕಾರ ಹಿಂದೇಟು ಹಾಕುತ್ತಿದೆ’ ಎಂದು ದೂರಿದರು.

‘ಕಾರಣವಿಲ್ಲದೆ ಕಾರ್ಯಕರ್ತೆಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುತ್ತಿದೆ. ಇದು ತಪ್ಪಬೇಕು. 48 ವರ್ಷಗಳಿಂದ ಲಕ್ಷಾಂತರ ಮಹಿಳೆಯರಿಗೆ ಗೌರವಧನ ಮಾತ್ರ ಕೊಟ್ಟು ದುಡಿಸಿಕೊಳ್ಳಲಾಗುತ್ತಿದೆ.ಆದೂ ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ’ ಎಂದು ಅಳಲು ತೋಡಿಕೊಂಡರು.

‘1ನೇ ತರಗತಿಗೆ ಸೇರ್ಪಡೆಯಾಗುವ ಮಗುವಿಗೆ ಅಂಗನವಾಡಿ ಯಿಂದಲೇ ಟಿ.ಸಿ (ವರ್ಗಾವಣೆ ಪತ್ರ) ನೀಡುವ ವ್ಯವಸ್ಥೆ ಆಗಬೇಕು. ಸರ್ಕಾರಿ ಶಾಲೆಗಳ ಬದಲಿಗೆ ಅಂಗನವಾಡಿಯಲ್ಲೇ ಪೂರ್ಣ ಪ್ರಮಾಣದ ಎಲ್‌ಕೆಜಿ, ಯುಕೆಜಿ ಶಿಕ್ಷಣ ನೀಡಬೇಕು’ ಎಂದು ಕೋರಿದರು.

ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಎಸ್‌. ಘಂಟಿ, ಪ್ರಧಾನ ಕಾರ್ಯದರ್ಶಿ ಎಚ್‌.ಎಸ್‌.ಸುನಂದಾ, ಖಜಾಂಚಿ ಜಿ.ಕುಮಲಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.