ಕೆ.ಆರ್.ಪುರ: ಹೊಸೂರು ಬಂಡೆ ಗ್ರಾಮದಲ್ಲಿ ಬಾನಾ ಇಕೋ ವರ್ಕ್ಸ್ ಪ್ರಾಣಿ ತ್ಯಾಜ್ಯ ಘಟಕವನ್ನು ಸ್ಥಗಿತಗೊಳಿಸಿ, ಬೇರೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿ ಬಿದರಹಳ್ಳಿ ಹೋಬಳಿ ಬ್ಲಾಕ್ ಕಾಂಗ್ರೆಸ್ ಘಟಕದ ಕಾರ್ಯಕರ್ತರು, ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು, ಮಹಿಳಾ ಶ್ರೀಶಕ್ತಿ ಸಂಘದ ಸದಸ್ಯರು ಕಣ್ಣೂರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದರು.
‘ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಅನುಮತಿ ಇಲ್ಲದೆ, ಹೊಸೂರು ಬಂಡೆ ಗ್ರಾಮದ ಸರ್ವೆ ನಂಬರ್ 50ರಲ್ಲಿ ಪ್ರಾಣಿ ತ್ಯಾಜ್ಯ ಘಟಕ ಕಾರ್ಯಾರಂಭ ಮಾಡಲಾಗಿದೆ. ಈಗಾಗಲೇ ಪಕ್ಕದಲ್ಲಿ ಇರುವಂತಹ ಕಣ್ಣೂರು-ಮಿಟ್ಟಗಾನಹಳ್ಳಿ ಬಿಬಿಎಂಪಿಯ ಘನತ್ಯಾಜ್ಯ ಘಟಕದಿಂದ ಸಾಕಷ್ಟು ಸಂಕಷ್ಟ ಎದುರಿಸಿದ್ದೇವೆ’ ಎಂದು ಬಿದರಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಣ್ಣೂರು ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
‘ಪ್ರಾಣಿತ್ಯಾಜ್ಯ ಘಟಕದಿಂದ ಇಲ್ಲಿನ ಜನರ ಅರೋಗ್ಯ ಸಮಸ್ಯೆ ಮತ್ತಷ್ಟು ಉಲ್ಬಣವಾಗಲಿದೆ. ಆದ್ದರಿಂದ ಘಟಕವನ್ನು ಜನ ಇಲ್ಲದ ಪ್ರದೇಶದ ಕಡೆ ಸ್ಥಳಾಂತರಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು’ ಎಂದರು.
‘ಮೂರು ದಿನದ ಹಿಂದೆ ಆರಂಭಗೊಂಡಿರುವ ಪ್ರಾಣಿ ತ್ಯಾಜ್ಯ ಸಂಸ್ಕರಣಾ ಘಟಕ ಅನುಮತಿ ಪಡೆದಿದೆಯೇ ಎಂದು ಪ್ರಶ್ನೆ ಮಾಡಿದರೆ, ‘ನಿಮ್ಮದೇ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿದೆ’ ಎಂದು ಉತ್ತರ ಕೊಡಲಾಗಿದೆ. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಕೇಳಿದಾಗ ಘಟಕ ತೆರೆಯಲು ಯಾವುದೇ ರೀತಿಯ ಅನುಮತಿ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ’ ಎಂದು ಭೂ ನ್ಯಾಯ ಮಂಡಳಿ ಸದಸ್ಯ ಬಿ.ವಿ.ವರುಣ್ ಅಕ್ರೋಶ ವ್ಯಕ್ತಪಡಿಸಿದರು.
ಭೂ ನ್ಯಾಯ ಮಂಡಳಿ ಸದಸ್ಯ ಬಿ.ವಿ.ವರುಣ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಪ್ರಶಾಂತ್, ಗ್ರಾಮ ಪಂಚಾಯಿತಿ ಸದಸ್ಯ ಡಾ.ಮಧು, ನಂಜೇಗೌಡ, ಬಿಳಿಶಿವಾಲೆ ಆನಂದ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.