ADVERTISEMENT

ತಂದೆಯ ಕ್ಯಾನ್ಸರ್‌ ಚಿಕಿತ್ಸೆಗೆ ಹಣ ಹೊಂದಿಸಲು ಕಳ್ಳತನ: ಆರೋಪಿ ಬಂಧನ

ಹೊರ ರಾಜ್ಯದ ಆರೋಪಿ ಬಂಧನ, ವೈಟ್‌ಫೀಲ್ಡ್ ಠಾಣೆ ಪೊಲೀಸರ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 14:31 IST
Last Updated 23 ಸೆಪ್ಟೆಂಬರ್ 2025, 14:31 IST
ಫಿರೋಜ್‌ 
ಫಿರೋಜ್‌    

ಬೆಂಗಳೂರು: ಮನೆಯ ಎದುರು ಹಾಗೂ ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನ ಕಳ್ಳತನ ಮಾಡುತ್ತಿದ್ದ ಹೊರರಾಜ್ಯದ ಆರೋಪಿಯನ್ನು ವೈಟ್‌ಫೀಲ್ಡ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಅನಂತಪುರದ ಫಿರೋಜ್ (24) ಬಂಧಿತ ಆರೋಪಿ.

ಬಂಧಿತ ಆರೋಪಿಯಿಂದ ₹20 ಲಕ್ಷ ಮೌಲ್ಯದ ವಿವಿಧ ಕಂಪನಿಯ 20 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್ ಸೀಮಾಂತ್‌ ಕುಮಾರ್ ಸಿಂಗ್‌ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.

ADVERTISEMENT

‘ಆರೋಪಿ ಫಿರೋಜ್‌ ಚಾಲಕ ವೃತ್ತಿ ಮಾಡಿಕೊಂಡಿದ್ದ. ಪತ್ನಿ ಹಾಗೂ ಮಗು ಜತೆಗೆ ಹೊಸಕೋಟೆಯ ಅನುಗೊಂಡನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದ. ಚಾಲಕ ಸಂಬಳದಿಂದ ಜೀವನ ನಡೆಸುತ್ತಿದ್ದ. ಈ ನಡುವೆ ಆರೋಪಿಯ ತಂದೆ ಮೊಹಮ್ಮದ್ ಪಾಷಾ ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಿದ್ದರು. ಚಿಕಿತ್ಸೆಗೆ ಹಣ ಹೊಂದಿಸಲಾಗದೇ ಆರೋಪಿ ಪರದಾಟ ನಡೆಸಿದ್ದ ಫಿರೋಜ್, ಒಮ್ಮೆ ದ್ವಿಚಕ್ರ ವಾಹನವೊಂದನನ್ನು ಕಳವು ಮಾಡಿ ಮಾರಾಟ ಮಾಡುವುದರಲ್ಲಿ ಯಶಸ್ವಿಯಾಗಿದ್ದ. ಆ ಬಳಿಕ ಕಳ್ಳತನ ಮುಂದುವರಿಸಿದ್ದ’ ಎಂದು ಪೊಲೀಸರು ಹೇಳಿದರು.

ವೈಟ್‌ಫೀಲ್ಡ್ ಮೆಟ್ರೊ ನಿಲ್ದಾಣದ ಸಮೀಪ, ಪಾರ್ಕಿಂಗ್ ಸ್ಥಳಗಳಲ್ಲಿ ದ್ವಿಚಕ್ರ ವಾಹನಗಳ ಹ್ಯಾಂಡಲ್ ತೆಗೆದು ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ. ಕಳವು ಮಾಡಿದ ವಾಹನಗಳನ್ನು ಆಂಧ್ರಪ್ರದೇಶ, ತೆಲಂಗಾಣ ಹಾಗೂ ರಾಜ್ಯದ ಬಳ್ಳಾರಿ, ಮಂಡ್ಯದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.

ಸೆ.9ರಂದು ವಿಜಯನಗರದ ನಿವಾಸಿಯೊಬ್ಬರು ಮಾರಮ್ಮ ದೇವಸ್ಥಾನದ ಬಳಿ ವಾಹನವೊಂದನ್ನು ನಿಲುಗಡೆ ಮಾಡಿ ತೆರಳಿದ್ದರು. ವಾಪಸ್ ಬಂದು ನೋಡುವಾಗ ಆ ಸ್ಥಳದಲ್ಲಿ ದ್ವಿಚಕ್ರ ವಾಹನ ಇರಲಿಲ್ಲ. ಅವರು ನೀಡಿದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಯಿತು. 12 ದ್ವಿಚಕ್ರ ವಾಹನಗಳ ವಾರಸುದಾರರು ಪತ್ತೆಯಾಗಿದ್ದು, ಉಳಿದ 8 ವಾಹನಗಳ ಮಾಲೀಕರು ಪತ್ತೆ ಆಗಬೇಕಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.