ADVERTISEMENT

ಅರ್ಕಾವತಿ ಬಡಾವಣೆ: ನೀಗದ ಬವಣೆ

ಕೆ.ಎಸ್.ಸುನಿಲ್
Published 27 ಮೇ 2025, 23:35 IST
Last Updated 27 ಮೇ 2025, 23:35 IST
   

ಬೆಂಗಳೂರು: ಅರ್ಕಾವತಿ ಬಡಾವಣೆ ನಗರದ ‘ಹೆಮ್ಮೆ’ಯ ಬಡಾವಣೆ ಎಂದು ಬಿಂಬಿಸಿಕೊಳ್ಳುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ), ಅಲ್ಲಿ ಮೂಲಸೌಕರ್ಯ ಕಲ್ಪಿಸದೇ ನಿವಾಸಿಗಳನ್ನು ಹೈರಾಣಾಗಿಸಿದೆ. ಅಭಿವೃದ್ಧಿಯ ಗಂಧ–ಗಾಳಿಯೂ ಇಲ್ಲದೇ ಕೊಂಪೆಯಂತಾಗಿದ್ದು, ಅಲ್ಲಿ ನಿವೇಶನ ಪಡೆದು ಮನೆ ಕಟ್ಟಿಕೊಂಡವರ ಪಡಿಪಾಟಲಂತೂ ಹೇಳ ತೀರದು.

ನ್ಯಾಯಾಲಯದಲ್ಲಿ ವ್ಯಾಜ್ಯ ಹಾಗೂ ಭೂ ಸ್ವಾಧೀನ ವಿಳಂಬದಿಂದಾಗಿ ಅರ್ಕಾವತಿ ಬಡಾವಣೆ ದಶಕ ಕಳೆದರೂ ಸಮಗ್ರ ಅಭಿವೃದ್ಧಿ ಕಂಡಿಲ್ಲ. ಕಷ್ಟಪಟ್ಟು ಮನೆ ಕಟ್ಟಿಕೊಂಡವರು ಮೂಲ ಸೌಲಭ್ಯಗಳಿಂದ ವಂಚಿತರಾಗಿ ವನವಾಸ ಅನುಭವಿಸುವಂತಾಗಿದೆ. ನಿವಾಸಿಗಳು ಹಾಗೂ ನಿವೇಶನದಾರರ ಸಂಕಷ್ಟಕ್ಕೆ ಬಿಡಿಎ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆರೋಪ ಇದೆ. ದೂರುಗಳ ಮೇಲೆ ದೂರು ಕೊಟ್ಟರೂ ಪ್ರತಿಕ್ರಿಯೆ ಶೂನ್ಯ. 

ಸುಮಾರು 1,766 ಎಕರೆ ಪ್ರದೇಶದಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಗೊಂಡಿದ್ದು, 22 ಬ್ಲಾಕ್‌ಗಳಲ್ಲಿ ಎಂಟು ಸಾವಿರಕ್ಕೂ ಅಧಿಕ ನಿವೇಶನಗಳಿವೆ.

ADVERTISEMENT

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್.ಪುರ ಹೋಬಳಿ, ದಾಸರಹಳ್ಳಿ, ಬೈರತಿಖಾನೆ, ಚಳ್ಳಕೆರೆ, ಗೆದ್ದಲಹಳ್ಳಿ, ಕೆ.ನಾರಾಯಣಪುರ, ರಾಚೇನಹಳ್ಳಿ, ಥಣಿಸಂದ್ರ, ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ಹೋಬಳಿ, ಅಮೃತಹಳ್ಳಿ, ಜಕ್ಕೂರು, ಕೆಂಪಾಪುರ, ಸಂಪಿಗೇಹಳ್ಳಿ, ಶ್ರೀರಾಮಪುರ, ವೆಂಕಟೇಶಪುರ, ಬೆಂಗಳೂರು ಉತ್ತರ ತಾಲ್ಲೂಕು ಕಸಬಾ ಹೋಬಳಿ, ಹೆಣ್ಣೂರು, ನಾಗವಾರ, ಹೆಬ್ಬಾಳದಲ್ಲಿ ನಿವೇಶನ ನಿರ್ಮಿಸಲಾಗಿದೆ.

ಸಂಪಿಗೆಹಳ್ಳಿ ಬಳಿ ಅವ್ಯವಸ್ಥೆ:

ಹೆಣ್ಣೂರು ಮತ್ತು ಗೆದ್ದಲಹಳ್ಳಿ ಭಾಗ ಅಭಿವೃದ್ದಿಯಾಗಿದೆ. ಆದರೆ, ಸಂಪಿಗೆಹಳ್ಳಿಯಲ್ಲಿರುವ ಎರಡು ಮತ್ತು ಮೂರನೇ ಬ್ಲಾಕ್, ಜಕ್ಕೂರು ಸುತ್ತಮುತ್ತ, ಶ್ರೀರಾಮಪುರ, ರಾಚೇನಹಳ್ಳಿ ಭಾಗದಲ್ಲಿ ಮೂಲಸೌಲಭ್ಯ ಇಲ್ಲದೆ ನಿವಾಸಿಗಳು ಪರದಾಡುತ್ತಿದ್ದಾರೆ.

ಒಳಚರಂಡಿ, ಬೀದಿ ದೀಪದ ವ್ಯವಸ್ಥೆ ಸಮರ್ಪಕವಾಗಿಲ್ಲ. ಇಲ್ಲಿ ಮಣ್ಣಿನ ರಸ್ತೆಗಳಿವೆ. ಎಂದೋ ಹಾಕಿರುವ ಜಲ್ಲಿಕಲ್ಲು ಮಳೆಗೆ ಕೊಚ್ಚಿ ಹೋಗಿವೆ. ಮಳೆಗಾಲದಲ್ಲಿ ರಸ್ತೆಗಳು ಕೆಸರುಗದ್ದೆಯಂತಾಗಿ, ಓಡಾಡಲು ಆಗದ ಸ್ಥಿತಿಯಲ್ಲಿದೆ. ಖಾಲಿ ನಿವೇಶನದಲ್ಲಿ ಗಿಡಗಂಟಿಗಳು ಎದೆಮಟ್ಟಕ್ಕೆ ಬೆಳೆದಿವೆ. ವಿಷ ಜಂತುಗಳ ಆವಾಸಸ್ಥಾನವಾಗಿದೆ. ನಿವೇಶನಗಳಿಗೆ ಹಾಕಿದ್ದ ಗುರುತಿನ ಕಲ್ಲುಗಳನ್ನೂ ಕಿತ್ತು ಹಾಕಲಾಗಿದೆ.

ರಸ್ತೆ, ವಿದ್ಯುತ್‌, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ. ಇದರಿಂದಾಗಿ ದಶಕಗಳ ಹಿಂದೆ ನಿವೇಶನ ಖರೀದಿಸಿದ್ದ ಬಹುಪಾಲು ಜನರಿಗೆ ಮನೆ ನಿರ್ಮಿಸಲು ಸಾಧ್ಯವಾಗಿಲ್ಲ. ಈಗಾಗಲೇ ನಿರ್ಮಾಣ ಗೊಂಡಿರುವ ಮನೆಗಳಿಗೆ ತೆರಳಲು ರಸ್ತೆಯೂ ಇಲ್ಲ. ಇದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರತಿನಿಧಿಸುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

‘ಹರಾಜಿನಲ್ಲಿ ಮೂಲೆ ನಿವೇಶನ ಖರೀದಿಸಿದ್ದೇನೆ. ದಶಕ ಕಳೆದರೂ ಬಡಾವಣೆಗೆ ಮೂಲಸೌಲಭ್ಯ ಕಲ್ಪಿಸಿಲ್ಲ. ಸೌಲಭ್ಯ ಕಲ್ಪಿಸದೇ ನಿವೇಶನಗಳ ಹರಾಜು ಪ್ರಕ್ರಿಯೆ ನಡೆಸಲಾಗಿದೆ. ಮನೆಗಳ ಮುಂದೆ ಮಾತ್ರ ದೀಪದ ಕಂಬ ಅಳವಡಿಸಲಾಗಿದೆ. ರಸ್ತೆಗಳಲ್ಲಿ ದೀಪದ ವ್ಯವಸ್ಥೆ ಇಲ್ಲ. ಒಳಚರಂಡಿ ವ್ಯವಸ್ಥೆ ಸರಿಯಿಲ್ಲ. ಮಳೆ ಬಂದರೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಮಳೆಗಾಲದಲ್ಲಿ ರಸ್ತೆ ಕೆಸರುಗದ್ದೆಯಂತಾಗಿ ಓಡಾಡಲು ಆಗುವುದಿಲ್ಲ. ವೃದ್ಧರು ಜಾರಿ ಬಿದ್ದಿರುವ ಹಲವು ಉದಾಹರಣೆ ಇದೆ’ ಎಂದು ನಿವಾಸಿ ಲೋಕೇಶ್ ಅಳಲು ತೋಡಿಕೊಂಡರು.

ಅರ್ಕಾವತಿ ಬಡಾವಣೆಯಲ್ಲಿ ಮಣ್ಣಿನ ರಸ್ತೆಯಲ್ಲಿ ಸಾಗಬೇಕಾದ ಸ್ಥಿತಿ.  

‘ಕಸ ಸಂಗ್ರಹ ವಾಹನ ಸರಿಯಾಗಿ ಬರುವುದಿಲ್ಲ. ಪ್ರಾಧಿಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಯಾರಿಗೆ ನಮ್ಮ ಸಮಸ್ಯೆ ಹೇಳುವುದು’ ಎಂದು ನಿವಾಸಿಗಳು ಪ್ರಶ್ನಿಸಿದರು.

‘ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ಆಗಿ, ಕಾರ್ಯಾದೇಶವನ್ನೂ ನೀಡಲಾಗಿದೆ. ಹಲವು ಭಾಗಗಳಲ್ಲಿ ರಸ್ತೆ ಡಾಂಬರೀಕರಣ ಕೆಲಸ ನಡೆಯುತ್ತಿದೆ. ಮಳೆಯಿಂದಾಗಿ ಕೆಲವು ಭಾಗದಲ್ಲಿ ಇನ್ನೂ ಆರಂಭವಾಗಿಲ್ಲ. ಒಳಚರಂಡಿ ಕಾಮಗಾರಿ ವೇಳೆ ವಿದ್ಯುತ್ ತಂತಿಗಳಿಗೆ ಹಾನಿಯಾಗಿರುವ ಕಾರಣ ಬೀದಿ ದೀಪದ ವ್ಯವಸ್ಥೆ ಸಮಸ್ಯೆಯಾಗಿದೆ’ ಎನ್ನುವುದು ಬಿಡಿಎ ಅಧಿಕಾರಿಗಳ ಸಮಜಾಯಿಷಿ.

ಡಾಂಬರು ಕಾಣದ ಮಣ್ಣಿನ ರಸ್ತೆ. 
'ಹಂತ ಹಂತವಾಗಿ ಮೂಲಸೌಕರ್ಯ'
‘ಬಡಾವಣೆಯ ಸಮಸ್ಯೆ ನನ್ನ ಗಮನದಲ್ಲಿದೆ. ಮೊದಲಿಗೆ ಕಾವೇರಿ ನೀರಿನ ಸಂಪರ್ಕ ಕಲ್ಪಿಸಬೇಕಾಗಿದೆ. ಆ ಬಳಿಕ ಒಳಚರಂಡಿ ಮತ್ತು ರಸ್ತೆಗೆ ಡಾಂಬರೀಕರಣ ಮಾಡುತ್ತೇವೆ. ಈ ಎಲ್ಲ ವ್ಯವಸ್ಥೆಯನ್ನು ಹಂತ ಹಂತವಾಗಿ  ಕಾರ್ಯಗತಗೊಳಿಸುತ್ತೇವೆ’ ಎಂದು ಸ್ಥಳೀಯ ಶಾಸಕರೂ ಆದ ಕಂದಾಯ ಸಚಿವ ಕೃಷ್ಣಬೈರೇಗೌಡ ತಿಳಿಸಿದರು. ‘ಈ ಸಂಬಂಧ ಬಿಡಿಎ ಸೇರಿ ಸಂಬಂಧಿಸಿದ ಸಂಸ್ಥೆಗಳ ಜತೆ ಸಂಪರ್ಕದಲ್ಲಿದ್ದೇನೆ. ಒಳಚರಂಡಿಗೆ ಅಗೆಯುವ ಕೆಲಸ ಇರುತ್ತದೆ. ಛೇಂಬರ್‌ ಕಟ್ಟಬೇಕು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ನಿರ್ಮಿಸಬೇಕಾಗಿದೆ. ಹಂತ ಹಂತವಾಗಿ ಮಾಡುತ್ತೇವೆ’ ಎಂದು ಅವರು ಹೇಳಿದರು.
8212 ನಿವೇಶನ ಅಭಿವೃದ್ಧಿ
2004ರಲ್ಲಿ ಅರ್ಕಾವತಿ ಬಡಾವಣೆ ನಿರ್ಮಾಣಕ್ಕೆ 3339.12 ಎಕರೆ ಭೂ ಸ್ವಾಧೀನಕ್ಕಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿತ್ತು. ಪ್ರಾಥಮಿಕ ಅಧಿಸೂಚನೆಯಂತೆ 2750 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಯಿತು. ಅದರಲ್ಲಿ 1766 ಎಕರೆ ಜಮೀನಿನಲ್ಲಿ ಬಡಾವಣೆ ರಚಿಸಲಾಗುತ್ತಿದೆ.  ಆರಂಭದಲ್ಲಿ 13689 ನಿವೇಶನ ರಚಿಸಲು ಉದ್ದೇಶಿಸಲಾಗಿತ್ತು. ಸದ್ಯ 8212 ರಲ್ಲಿ ನಿವೇಶನ ರಚನೆ ಮಾಡಿ ಹಂಚಿಕೆ ಮಾಡಲಾಗಿದೆ. ಭೂಸ್ವಾಧೀನ ತಕರಾರಿನಿಂದ 5477 ನಿವೇಶನಗಳನ್ನು ರಚಿಸಲಾಗಿಲ್ಲ ಎಂದು ಬಿಡಿಎ ಮಾಹಿತಿ ನೀಡಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.