
ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಜ.4ರಂದು 23ನೇ ಚಿತ್ರಸಂತೆ ಹಮ್ಮಿಕೊಂಡಿದ್ದು, ಪ್ರಕೃತಿ ವಿಷಯಾಧಾರಿತ ಕಲಾಕೃತಿಗಳ ಪ್ರದರ್ಶನ ಈ ಬಾರಿಯ ವಿಶೇಷವಾಗಿರಲಿದೆ.
‘ನಗರದ ಕುಮಾರ ಕೃಪಾ ರಸ್ತೆ, ಕ್ರೆಸೆಂಟ್ ರಸ್ತೆ ಹಾಗೂ ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಆವರಣ, ಸೇವಾದಳ ಮೈದಾನದಲ್ಲಿ ಬೆಳಿಗ್ಗೆ 8ರಿಂದ ರಾತ್ರಿ 8ರವರೆಗೆ ಚಿತ್ರಸಂತೆ ನಡೆಯಲಿದೆ. 22 ರಾಜ್ಯಗಳು, ನಾಲ್ಕು ಕೇಂದ್ರಾಡಳಿತ ಪ್ರದೇಶಗಳ 1,500ಕ್ಕೂ ಹೆಚ್ಚು ಕಲಾವಿದರು ಭಾಗಿಯಾಗಲಿದ್ದಾರೆ. ದುಬೈನ ಕಲಾವಿದರೊಬ್ಬರು ಪಾಲ್ಗೊಳ್ಳುವರು’ ಎಂದು ಪರಿಷತ್ತಿನ ಅಧ್ಯಕ್ಷ ಬಿ.ಎಲ್.ಶಂಕರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಬಾರಿ ಪ್ರದರ್ಶನದಲ್ಲಿ ಪಾಲ್ಗೊಳ್ಳುವುದಕ್ಕೆ 3,314 ಮಂದಿ ಕಲಾವಿದರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ ಶೇ 50ರಷ್ಟನ್ನು ಕರ್ನಾಟಕದವರಿಗೆ ನೀಡಲಾಗಿದೆ. ಬೇರೆ ರಾಜ್ಯಗಳ ಕಲಾವಿದರಿಗೂ ಅವಕಾಶ ನೀಡಲಾಗಿದೆ. 473 ಮಹಿಳೆಯರೂ ಸಂತೆಯಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸುವರು, ಇವರಲ್ಲಿ ಹಿರಿಯರು, ಅಂಗವಿಕಲರೂ ಇದ್ದಾರೆ. ಅವಕಾಶ ಸಿಗದವರು ವರ್ಚ್ಯುಯಲ್ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿಸಬಹುದು’ ಎಂದರು.
‘ಬೆಂಗಳೂರಿನ ಭೌಗೋಳಿಕ ರಚನೆ, ನದಿಗಳು, ಅರಣ್ಯ, ವನ್ಯಜೀವಿ, ಮಾನವನ ಸಹಬಾಳ್ವೆ ಹಾಗೂ ಹವಾಮಾನ ಬದಲಾವಣೆಯ ಪರಿಣಾಮ ಪ್ರದರ್ಶನದ ಪ್ರಮುಖ ವಸ್ತುವಿಷಯವಾಗಿರಲಿದೆ. ಕಲೆಗಳ ಮೂಲಕ ವೈಜ್ಞಾನಿಕ ಅರಿವು, ಪರಿಸರದ ಮಹತ್ವ ಸಾರುವುದು ನಮ್ಮ ಉದ್ದೇಶ. ಪ್ರಕೃತಿ ವಿಷಯಾಧಾರಿತ ಕಲಾ ಪ್ರದರ್ಶನವು ಜ.12ರವರೆಗೆ ಚಿತ್ರಕಲಾ ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ನಡೆಯಲಿದೆ’ ಎಂದು ವಿವರಿಸಿದರು.
‘ಬೆಳಿಗ್ಗೆ 10.30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿತ್ರಸಂತೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಲಾ ಪ್ರದರ್ಶನ ಉದ್ಘಾಟಿಸುವರು. ಚಿತ್ರಸಂತೆಗೆ ರಾಜ್ಯ ಸರ್ಕಾರ ₹50 ಲಕ್ಷ ನೀಡಿದೆ. ನೋಂದಣಿ, ದಾನಿಗಳ ನೆರವಿನಿಂದ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಶಂಕರ್ ತಿಳಿಸಿದರು.
‘ಮೆಜೆಸ್ಟಿಕ್, ಮಂತ್ರಿ ಮಾಲ್, ವಿಧಾನಸೌಧ ಮೆಟ್ರೊ ನಿಲ್ದಾಣದಿಂದ ಶಿವಾನಂದ ವೃತ್ತದವರೆಗೆ ಫೀಡರ್ ಬಸ್ ಸೇವೆ ಇರಲಿದೆ. ಹಸಿರು ಸ್ವಯಂ ಸೇವಕರು ಕಲಾಸಕ್ತರಿಗೆ ಅಗತ್ಯ ಮಾರ್ಗದರ್ಶನ ನೀಡುವರು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.