
ಸಾಂದರ್ಭಿಕ ಚಿತ್ರ
ಬೆಂಗಳೂರು: ನಾರಾಯಣ ಸೇವಾ ಸಂಸ್ಥಾನವು ಬಸವನಗುಡಿಯಲ್ಲಿರುವ ಮಹಾವೀರ ಧರ್ಮಶಾಲಾದಲ್ಲಿ ಮಾರ್ಚ್ 1ರಂದು 640 ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಹಾಗೂ ಸಹಾಯಕ ಸಾಧನಗಳನ್ನು ವಿತರಿಸುವ ಶಿಬಿರ ಹಮ್ಮಿಕೊಂಡಿದೆ.
ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಪ್ರಶಾಂತ್ ಅಗರ್ವಾಲ್, ‘ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ಈ ಶಿಬಿರದ ಉದ್ದೇಶವಾಗಿದೆ. ಬೆಳಿಗ್ಗೆ 8ರಿಂದ ಸಂಜೆ 6 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಕೃತಕ ಕಾಲುಗಳನ್ನು ಅಳವಡಿಕೆ ಮಾಡಲಾಗುತ್ತದೆ. ವಿವಿಧ ಸಂಸ್ಥೆಗಳು ಈ ಕಾರ್ಯಕ್ಕೆ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನಿಧಿಯಡಿ (ಸಿಎಸ್‌ಆರ್) ನೆರವು ನೀಡುತ್ತಿವೆ’ ಎಂದು ಹೇಳಿದರು.
‘550 ಅಂಗವಿಕಲರಿಗೆ ಅತ್ಯಾಧುನಿಕ ನಾರಾಯಣ ಕೃತಕ ಕಾಲುಗಳನ್ನು, ಉಳಿದವರಿಗೆ ಸಹಾಯಕ ಸಾಧನಗಳನ್ನು ನೀಡಲಾಗುತ್ತದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಶಿಬಿರದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ’ ಎಂದರು.
‘ಸಂಸ್ಥೆಯ ವತಿಯಿಂದ ಈವರೆಗೆ ದೇಶದ ವಿವಿಧೆಡೆ ಶಿಬಿರ ನಡೆಸಿ, 39 ಸಾವಿರಕ್ಕೂ ಅಧಿಕ ಕೃತಕ ಕಾಲುಗಳನ್ನು ಒದಗಿಸಲಾಗಿದೆ. 4.52 ಲಕ್ಷಕ್ಕೂ ಹೆಚ್ಚು ಅಂಗವಿಕಲರಿಗೆ ಉಚಿತ ವೈದ್ಯಕೀಯ ನೆರವು ನೀಡಲಾಗಿದೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.