ಬೆಂಗಳೂರು: ನಗರವು ಬೆಳೆದಂತೆ ಅಪಾರ್ಟ್‌ಮೆಂಟ್ ವ್ಯಾಜ್ಯಗಳೂ ಹೆಚ್ಚಾಗುತ್ತಿವೆ. ಅಪಾರ್ಟ್‌ಮೆಂಟ್ ಖರೀದಿಸುವ ಮೊದಲೇ ಕಾನೂನು ತಿಳಿದುಕೊಂಡರೆ ಸಮಸ್ಯೆ ಕಡಿಮೆಯಾಗಲಿದೆ ಎಂದು ಕರ್ನಾಟಕ ವಕೀಲರ ಸಂಘದ ನಿಯೋಜಿತ ಹಿರಿಯ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅಭಿಪ್ರಾಯಪಟ್ಟರು.
ನಗರದಲ್ಲಿ ಶನಿವಾರ ನಡೆದ ‘ನಾವು ತಿಳಿಯಬೇಕಾದ ಅಪಾರ್ಟ್‌ಮೆಂಟ್ ಕಾನೂನು’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ತಿಳಿವಳಿಕೆ ಇದ್ದಾಗ ಮೋಸ ಹೋಗುವುದು ತಪ್ಪುತ್ತದೆ. ಖರೀದಿ ಮಾಡಿದ ಬಳಿಕ ತಲೆಕೆಡಿಸಿಕೊಳ್ಳುವ ಮೊದಲು ಎಲ್ಲ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಬೇಕು. ಆಗ ತೊಂದರೆಗೆ ಸಿಲುಕಿದ ಮೇಲೆ ವಕೀಲರನ್ನು ಹುಡುಕುವುದು ತಪ್ಪಲಿದೆ’ ಎಂದು ಮಾಹಿತಿ ನೀಡಿದರು.
ವಕೀಲರಾದ ಬೀನಾ ಪಿಳ್ಳೈ ಮಾತನಾಡಿ, ‘ಆಸ್ತಿ ಹೊಂದುವುದು ಎಲ್ಲರ ಹಕ್ಕು. ವಸತಿ ಮಾರಾಟ ಮತ್ತು ಖರೀದಿ ಮಾಡುವಾಗ ಜಾಗರೂಕರಾಗಿರಬೇಕು. ಕರ್ನಾಟಕ ಸೊಸೈಟಿ ಕಾಯ್ದೆ, ಕರ್ನಾಟಕ ಕೋ ಆಪರೇಟಿವ್ ಕಾಯ್ದೆ ಮತ್ತು ಕರ್ನಾಟಕ ಅಪಾರ್ಟ್‌ಮೆಂಟ್ ಓನರ್‌ಶಿಪ್ ಕಾಯ್ದೆಗಳನ್ನು ತಿಳಿದಿರಬೇಕು. ಅಪಾರ್ಟ್‌ಮೆಂಟ್‌ನಲ್ಲಿ ನೆಮ್ಮದಿಯಾಗಿ ಇರಲು ಏನೆಲ್ಲ ಸೌಲಭ್ಯ ಒದಗಿಸಬೇಕು ಎಂಬ ಮೂಲ ಅಂಶಗಳ ಕಡೆಗೂ ಗಮನ ನೀಡಬೇಕು’ ಎಂದು ಹೇಳಿದರು.
ನಿವೃತ್ತ ಲೋಕಾಯುಕ್ತ ನ್ಯಾ. ಎನ್. ಸಂತೋಷ್ ಹೆಗ್ಡೆ, ಕೇರಳದ ನಿವೃತ್ತ ನ್ಯಾಯಾಧೀಶ ಕೆ. ರಾಮಚಂದ್ರನ್, ಎಂಆರ್‌ಪಿಎಲ್ ಮುಖ್ಯ ಸಲಹೆಗಾರ ಅಲ್ ರಫೀಕ್ ಮೊಯ್ದೀನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.