
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು: ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಹಾಗೂ ರಾಜ್ಯದ ಗೌರವಧನ ಸೇರಿಸಿ ತಿಂಗಳಿಗೆ ಒಟ್ಟು ₹15 ಸಾವಿರ ಗೌರವಧನ ನೀಡುವುದು, ಕೆಲಸದಿಂದ ವಜಾಗೊಳಿಸುವ ನಿರ್ಧಾರವನ್ನು ಕೈಬಿಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘವು ಶುಕ್ರವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೂರಾರು ಕಾರ್ಯಕರ್ತೆಯರು ಭಿತ್ತಿಪತ್ರಗಳನ್ನು ಪ್ರದರ್ಶಿಸಿ, ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು ಹೆಚ್ಚಿಸುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಬೇಕು. ನಿವೃತ್ತ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ನೀಡಬೇಕು. ಅಂಗನವಾಡಿ ಮಾದರಿಯಲ್ಲಿ ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಬೇಕು. ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಕಾರ್ಯಕರ್ತೆಯರಿಗೆ ಮೂರು ತಿಂಗಳ ನಿಶ್ಚಿತ ಗೌರವಧನ ಪಾವತಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಡಿ.ನಾಗಲಕ್ಷ್ಮಿ ಮಾತನಾಡಿ, ಚುನಾವಣಾ ಪ್ರಣಾಳಿಕೆಯಲ್ಲಿ ತಿಂಗಳ ಗೌರವ ಧನವನ್ನು ₹8 ಸಾವಿರಕ್ಕೆ ಹೆಚ್ಚಳ ಮಾಡುವುದಾಗಿ ನೀಡಿದ್ದ ಭರವಸೆ ಈಡೇರಿಲ್ಲ. ಸಚಿವರು, ಅಧಿಕಾರಿಗಳು ಹಲವು ಬಾರಿ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಕಾರ್ಯಕರ್ತೆಯರು ಪ್ರತಿಭಟನೆಗೆ ಮುಂದಾಗಿದ್ದಾರೆ ಎಂದರು.
ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಮಾತನಾಡಿ, ‘ಆಶಾ ಕಾರ್ಯಕರ್ತೆಯರ ಪೋತ್ಸಾಹ ಧನ ಹೆಚ್ಚಿಸಿಲ್ಲ. ಕೇಂದ್ರ ಸರ್ಕಾರ ₹1,500 ಹೆಚ್ಚಿಸುವುದಾಗಿ ಹೇಳಿತ್ತಾದರೂ, ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿಲ್ಲ. ಮುಖ್ಯಮಂತ್ರಿ ಅವರು ಮಾತು ತಪ್ಪಲ್ಲ ಎಂದು ಹೇಳಿ ಮಾತು ಮರೆತಿದ್ದಾರೆ. ಇಲ್ಲಿ ದಾರಿ ತಪ್ಪಿರುವುದು ಯಾರು ಎಂಬ ಪ್ರಶ್ನೆ ಎಲ್ಲರದ್ದಾಗಿದೆ ಎಂದರು.
ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ರಾಜ್ಯ ಅಧ್ಯಕ್ಷ ಕೆ.ಸೋಮಶೇಖರ್ ಯಾದಗಿರಿ, ‘ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೈಬಿಡಲು ಮುಂದಾಗಿರುವುದು ಸರಿಯಲ್ಲ. ಇದು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಉಲ್ಲಂಘನೆ’ ಎಂದರು.
ಸಂಘದ ರಾಜ್ಯ ಉಪಾಧ್ಯಕ್ಷರಾದ ಎಂ. ಉಮಾದೇವಿ, ರಮಾ ಟಿ.ಸಿ, ಹನುಮೇಶ್, ಶ್ರೀಕಾಂತ್, ಮಂಜುಳಾ, ನಾಗಲಕ್ಷ್ಮಿ, ಫರಾನಾ, ಲಕ್ಷ್ಮಿ ದೇವಮ್ಮ, ವೀಣಾ, ಶಾರದಾ ಶಶಿಕಲಾ, ಶಾಂತಮ್ಮ, ಸರಸ್ವತಿ, ರೇಖಾ, ನಿರ್ಮಲಾ, ವಸಂತಾ, ರೇಷ್ಮಾ, ವಾಣಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.