
ಬೆಂಗಳೂರು: ನಾಲ್ಕು ತಿಂಗಳಿಂದ ಬಾಕಿ ಉಳಿದಿರುವ ಪ್ರೋತ್ಸಾಹ ಧನ ಬಿಡುಗಡೆಗೆ ಆಗ್ರಹಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ (ಎಐಯುಟಿಯುಸಿ) ನೇತೃತ್ವದಲ್ಲಿ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಬೆಂಗಳೂರು ವಲಯ ಮಟ್ಟದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಪ್ರೋತ್ಸಾಹಧನ ಬಿಡುಗಡೆ ಮಾಡದ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನಕಾರರು ಆಕ್ರೋಶ ಹೊರಹಾಕಿದರು.
ವಿವಿಧೆಡೆಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಆಶಾ ಕಾರ್ಯಕರ್ತೆಯರು, ‘ಎನ್‌ಎಚ್‌ಎಂ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಪಟ್ಟುಹಿಡಿದರು.
2025ರ ಜನವರಿಯಲ್ಲಿ ತಿಂಗಳಿಗೆ ₹10 ಸಾವಿರ ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿ ಹೊರಡಿಸಿದ್ದ ಆದೇಶವನ್ನು ಸಾಕಾರಗೊಳಿಸಬೇಕು ಎಂದು ಆಶಾ ಕಾರ್ಯಕರ್ತೆಯರು ಆಗ್ರಹಿಸಿದರು.
ಪ್ರತಿಭಟನೆಯ ನಂತರ ಸಂಘದ ರಾಜ್ಯ ಉಪಾಧ್ಯಕ್ಷೆ ಟಿ.ಸಿ. ರಮಾ ನೇತೃತ್ವದಲ್ಲಿ ಪ್ರತಿಭಟನಕಾರರು ಆರೋಗ್ಯ ಸೌಧಕ್ಕೆ ತೆರಳಿ ಎನ್‌ಎಚ್‌ಎಂ ನಿರ್ವಹಣಾಧಿಕಾರಿ ಅವಿನಾಶ್ ಮೆನನ್ ಅವರಿಗೆ ಮನವಿ ಸಲ್ಲಿಸಿದರು.
ಬಾಕಿ ಹಣವನ್ನು ಜ. 5ರ ಒಳಗೆ ಬಿಡುಗಡೆ ಮಾಡುವುದಾಗಿ ಅವಿನಾಶ್ ಮೆನನ್ ಅವರು ಭರವಸೆ ನೀಡಿದ್ದಾರೆ ಎಂದು ಸಂಘದ ವಕ್ತಾರ ಶ್ರೀಕಾಂತ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.