ಬೆಂಗಳೂರು: ‘ಸಂಸಾರದಲ್ಲಿ ಗಂಭೀರ ಸಮಸ್ಯೆಗಳಿದ್ದರೂ ಅವುಗಳನ್ನು ದಾಟಿ ಯಶಸ್ಸು ಸಾಧಿಸುವ ಮೂಲಕ ಇತರರಿಗೆ ಮಾದರಿಯಾಗಬೇಕು’ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸಹಯೋಗದಲ್ಲಿ ಅನ್ನಪೂರ್ಣ ಪಬ್ಲಿಕೇಷನ್ ಹೌಸ್ ಹಾಗೂ ಮೈಸೂರಿನ ಅಭಿರುಚಿ ಪ್ರಕಾಶನ ಜಂಟಿಯಾಗಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುಚೇತ ಕೆ.ಎಸ್. ಅವರ ‘ಕೇಳದ ಕಿವಿಗಳು ಹೇಳಿದ ಕತೆ’ ಹಾಗೂ ‘ಬರಿ ಕತೆಯಲ್ಲ–ಅಗ್ರಹಾರದ ಕಥನ’ ಕೃತಿ ಬಿಡುಗಡೆಯಾಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಶೋಕ ಹಾರನಹಳ್ಳಿ, ‘ಕೆಲವರು ಸಂಸಾರದಲ್ಲಿನ ಸಣ್ಣಪುಟ್ಟ ಸಮಸ್ಯೆಗಳ ಬಗ್ಗೆಯೂ ಚಿಂತಿಸಿ, ಇನ್ನಷ್ಟು ತೊಂದರೆ ತಂದುಕೊಳ್ಳುತ್ತಾರೆ. ಕೆಲವರು ಖಿನ್ನತೆಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕುವುದನ್ನು ಕಾಣುತ್ತಿದ್ದೇವೆ. ತಂದೆ, ತಾಯಿ, ಪತಿ, ಪತ್ನಿ ಅಥವಾ ಮಕ್ಕಳಲ್ಲಿ ಅಂಗವೈಕಲ್ಯತೆಗಳಿದ್ದರೂ ಅಂತಹವುಗಳನ್ನು ಮೀರಿ ಬೆಳೆಯುವ ಉತ್ಸಾಹ ಇಂದು ಎಲ್ಲ ಸಂಸಾರಗಳಲ್ಲಿ ಬರಬೇಕು’ ಎಂದರು.
ಕೃತಿಯ ಬಗ್ಗೆ ಮಾತನಾಡಿದ ಲೇಖಕಿ ಗೀತಾ ವಸಂತ, ‘ಎಂತಹ ಸಂದಿಗ್ಧ ಸಂದರ್ಭದಲ್ಲೂ ತಂದೆ–ತಾಯಿ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣ ಕೊಡುವುದು ಬಹುಮುಖ್ಯ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.