ನಗರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಶೋಕ ಬಿ. ಹಿಂಚಿಗೇರಿ ಅವರು ಅಧ್ಯಯನ ವರದಿ ಬಿಡುಗಡೆ ಮಾಡಿದರು. ಪೂರ್ಣ ರವಿಶಂಕರ್, ಸಂಗೀತಾ, ಸರಸು ಎಸ್ತರ್ ಥಾಮಸ್, ಡೋನಾ ಫರ್ನಾಂಡಿಸ್, ಬಿಂದು, ಪ್ರಗ್ಯ ಇದ್ದಾರೆ.
ಪ್ರಜಾವಾಣಿ ಚಿತ್ರ
ಬೆಂಗಳೂರು: ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾತ್ರಕ್ಕೆ ಅದನ್ನು ಹಿಂಪಡೆಯಲು ಆಗುವುದಿಲ್ಲ. ಹಾಗೆಯೇ, ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಯ ಪ್ರಮಾಣ ಕಡಿಮೆ ಆಗುತ್ತಿದೆ ಎಂಬ ಕಾರಣಕ್ಕೆ ಆ ಕಾಯ್ದೆಯನ್ನು ರದ್ದಗೊಳಿಸಲು ಆಗುವುದಿಲ್ಲ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಅಶೋಕ ಬಿ. ಹಿಂಚಿಗೇರಿ ಹೇಳಿದರು.
ನಗರದಲ್ಲಿ ಶನಿವಾರ ಅವೇಕ್ಷಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲೆ ಬಿಂದು ಎನ್. ದೊಡ್ಡಹಟ್ಟಿ ಮತ್ತು ಪ್ರಗ್ಯ ಸೋಲಂಕಿ ಅವರ ‘ಕಾನೂನು ಮತ್ತು ಅದರ ಮಿತಿಗಳು: ಕೌಟುಂಬಿಕ ಹಿಂಸೆ ಮತ್ತು ವೈವಾಹಿಕ ಕ್ರೌರ್ಯದ ಕುರಿತು ಪ್ರಾಯೋಗಿಕ ಅಧ್ಯಯನ’ ವರದಿ ಬಿಡುಗಡೆ ಮಾಡಿ ಮಾತನಾಡಿದರು.
‘ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಕೆಲವು ಅತೃಪ್ತ ಮಹಿಳೆಯರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬುದು ಪುರುಷ ಹಕ್ಕುಗಳ ಕಾರ್ಯಕರ್ತರು ಆರೋಪವಾಗಿದೆ. ಇಂತಹ ಆರೋಪಗಳು, ಕಾರಣ ಮತ್ತು ವಾದವನ್ನು ಒಪ್ಪಲು ಅರ್ಹವೇ ಎಂಬುದನ್ನು ನನಗೆ ನಾನು ಪ್ರಶ್ನಿಸಿಕೊಳ್ಳುತ್ತೇನೆ’ ಎಂದರು.
ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಇದರಲ್ಲಿ ನಾಗರಿಕ ಸಮಾಜ, ವಸ್ತುನಿಷ್ಠ ಮಾಧ್ಯಮಗಳು, ಕಾನೂನು ಜಾರಿ ಸಂಸ್ಥೆಗಳು, ನ್ಯಾಯಾಂಗದ ಪಾತ್ರ ಮುಖ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.
ವಕೀಲೆ ಬಿಂದು ಎನ್. ದೊಡ್ಡಹಟ್ಟಿ ಮಾತನಾಡಿ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮಹಿಳಾ ದೌರ್ಜನ್ಯಗಳ ಬಗ್ಗೆ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ನಡೆಸಿ, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಂತ್ವನ ಕೇಂದ್ರಗಳಿಗೆ ಅನುದಾನವನ್ನು ನೀಡಬೇಕು ಎಂದು ಹೇಳಿದರು.
ಸಿಇಎಚ್‌ಎಟಿ ಮಾಜಿ ನಿರ್ದೇಶಕಿ ಸಂಗೀತಾ ರೇಗೆ, ಪ್ರಾಧ್ಯಾಪಕಿ ಸರಸು ಎಸ್ತರ್ ಥಾಮಸ್, ಅವೇಕ್ಷಾ ಸಂಸ್ಥೆಯ ಡೋನಾ ಫರ್ನಾಂಡಿಸ್, ವಕೀಲರಾದ ಪೂರ್ಣ ರವಿಶಂಕರ್ ಹಾಜರಿದ್ದರು.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ದೂರು ಬಂದರೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿ ಕ್ರಮ ವಹಿಸಬೇಕು.
ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಮಾಹಿತಿಯನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ(ಎನ್‌ಸಿಆರ್‌ಬಿ) ಪ್ರತ್ಯೇಕವಾಗಿ ದಾಖಲಿಸಬೇಕು.
ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ಜಾತಿ ಧರ್ಮ ವರ್ಗ ಅಂಗವೈಕಲ್ಯ ಮತ್ತು ಆರ್ಥಿಕ ಸ್ಥಿತಿಯ ಮಾಹಿತಿಯನ್ನು ನಮೂದಿಸಬೇಕು.
18 ವರ್ಷಕ್ಕಿಂತ ಮೊದಲೇ ವಿವಾಹವಾಗಿರುವ ಬಾಲಕಿಯರು ನೀಡಿದ ದೂರನ್ನು ಪರಿಗಣಿಸಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರಲ್ಲಿ ದಾಖಲಿಸಬೇಕು.
ವಿವಾಹವಾಗಿ ಏಳು ವರ್ಷಗಳ ನಂತರ ವರದಕ್ಷಿಣೆ ಕಿರುಕುಳ ನೀಡಿದರೆ ದೂರು ದಾಖಲಾಗುವುದಿಲ್ಲ. ಇದು ಅವೈಜ್ಞಾನಿಕವಾಗಿದ್ದು ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅವಧಿಯ ನಿರ್ಬಂಧವನ್ನು ತೆಗೆಯಬೇಕು.
ಮಹಿಳಾ ಆತ್ಮಹತ್ಯೆ ಪ್ರಕರಣಗಳಲ್ಲಿ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ಹಿಂಸಾಚಾರದ ಬಗ್ಗೆಯೂ ಮಾಹಿತಿಯನ್ನು ಒದಗಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.