ADVERTISEMENT

ಸಹಪಾಠಿ ಬಾಲಕಿ ಜೊತೆ ದ್ವಿಚಕ್ರ ವಾಹನದಲ್ಲಿ ಸುತ್ತಾಡಿದ್ದಕ್ಕೆ ಹಲ್ಲೆ: ದೂರು

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2023, 0:04 IST
Last Updated 5 ಆಗಸ್ಟ್ 2023, 0:04 IST
   

ಬೆಂಗಳೂರು: ‘ಸಹಪಾಠಿ ಬಾಲಕಿ ಜೊತೆ ದ್ವಿಚಕ್ರ ವಾಹನದಲ್ಲಿ ಸುತ್ತಾಡಿದ’ ಎಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಲಾಗಿದ್ದು, ಈ ಸಂಬಂಧ ಜೆ.ಪಿ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಠಾಣೆ ವ್ಯಾಪ್ತಿಯಲ್ಲಿರುವ ಪಿ.ಯು ಕಾಲೇಜಿನಲ್ಲಿ ನಡೆದಿರುವ ಘಟನೆ ಬಗ್ಗೆ ಸಂತ್ರಸ್ತ ವಿದ್ಯಾರ್ಥಿ ದೂರು ನೀಡಿದ್ದಾನೆ. ಬಾಲಕಿಯ ಅಣ್ಣನ ಸ್ನೇಹಿತ ಹಾಗೂ ಇತರರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ. ಎಲ್ಲರೂ ಅಪ್ರಾಪ್ತರು. ಹೀಗಾಗಿ, ಹೆಸರು ಬಹಿರಂಗಪಡಿಸಲಾಗದು’ ಎಂದು ಪೊಲೀಸರು ಹೇಳಿದರು.

‘ಸಂತ್ರಸ್ತ ವಿದ್ಯಾರ್ಥಿ ಹಾಗೂ ಸಹಪಾಠಿ ಬಾಲಕಿ, ಪ್ರಥಮ ಪಿಯುಸಿ ವಿದ್ಯಾರ್ಥಿಗಳು. ಕಾಲೇಜಿನಲ್ಲಿ ಜುಲೈ 22ರಂದು ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಕಾರ್ಯಕ್ರಮದ ನಂತರ ಬಾಲಕಿಯ ಜೊತೆ ಆಕೆಯ ದ್ವಿಚಕ್ರ ವಾಹನದಲ್ಲಿ ವಿದ್ಯಾರ್ಥಿ ಸುತ್ತಾಡಿದ್ದ. ಅದನ್ನು ಬಾಲಕಿಯ ಅಣ್ಣ ನೋಡಿದ್ದ.’

ADVERTISEMENT

‘ಸ್ನೇಹಿತನಾಗಿದ್ದ ಆರೋಪಿಗೆ ವಿಷಯ ತಿಳಿಸಿದ್ದ ಅಣ್ಣ, ತಂಗಿ ಜೊತೆ ಸುತ್ತಾಡುತ್ತಿರುವ ಹುಡುಗನಿಗೆ ತಾಕೀತು ಮಾಡುವಂತೆ ಹೇಳಿದ್ದ. ಜುಲೈ 25ರಂದು ವಿದ್ಯಾರ್ಥಿಯನ್ನು ಅಡ್ಡಗಟ್ಟಿ ಅಪಹರಿಸಿದ್ದ ಆರೋಪಿಗಳು, ಮಾರಕಾಸ್ತ್ರಗಳಿಂದ ಹೊಡೆದಿದ್ದರು. ಯಾರಿಗೂ ವಿಷಯ ತಿಳಿಸದಂತೆ ಬೆದರಿಸಿ ಬಿಟ್ಟು ಕಳುಹಿಸಿದ್ದರು. ಹಲ್ಲೆ ವಿಚಾರ ಗೊತ್ತಾಗುತ್ತಿದ್ದಂತೆ ಪೋಷಕರು ಆಗಸ್ಟ್ 1ರಂದು ಠಾಣೆಗೆ ಬಂದು ದೂರು ನೀಡಿದ್ದಾರೆ. ಆರೋಪಿಗಳನ್ನು ವಿಚಾರಣೆ ನಡೆಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.