ADVERTISEMENT

ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಮೇಲೆ ಯುವಕರ ಹಲ್ಲೆ: ಕೋಮಾ ಸ್ಥಿತಿಯಲ್ಲಿ ಯುವತಿ

ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 10 ಜೂನ್ 2020, 20:30 IST
Last Updated 10 ಜೂನ್ 2020, 20:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರೀತಿಗಾಗಿ ಕಿತ್ತಾಡಿಕೊಂಡ ಯುವಕರಿಬ್ಬರು ಯುವತಿ ಮೇಲೆ ಹಲ್ಲೆ ನಡೆಸಿದ್ದರಿಂದ ತೀವ್ರ ಗಾಯಗೊಂಡಿರುವ ಈಕೆ ಖಾಸಗಿ ಆಸ್ಪತ್ರೆಯಲ್ಲಿ ಸಾವು– ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದು, ಪರಿಸ್ಥಿತಿ ಗಂಭೀರವಾಗಿದೆ.

ಎಂಜಿನಿಯರಿಂಗ್‌ ವಿದ್ಯಾರ್ಥಿನಿಯಾಗಿರುವ ಯುವತಿ ಕೊನೆಯ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ. ಇದೇ 7ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸ್ನೇಹಿತರ ಹುಟ್ಟುಹಬ್ಬ ಎಂದು ಹೇಳಿ ಮನೆಯಿಂದಹೊರ ಹೋಗಿದ್ದರು. 8 ಗಂಟೆ ಸುಮಾರಿಗೆ ಯುವತಿ ಸ್ನೇಹಿತ ಬಬಿತ್‌ ಎಂಬಾತನ ಮನೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಬಬಿತನೇ ಫೋನ್‌ ಮಾಡಿ ಆಕೆಯ ಪೋಷಕರಿಗೆ ವಿಷಯ ತಿಳಿಸಿದ. ಆನಂತರ ಅವರು ಮಗಳನ್ನು ಕರೆದೊಯ್ದು ಆಸ್ಪತ್ರೆಗೆ ಸೇರಿಸಿದರು ಎನ್ನಲಾಗಿದೆ.

ಯುವತಿ ಹಾಗೂ ಬಬಿತ್‌ ನಾಲ್ಕು ವರ್ಷಗಳಿಂದ ಸಂಪರ್ಕದಲ್ಲಿದ್ದರು. ಬಳಿಕ ಈಕೆ ರಾಹುಲ್‌ ಎಂಬಾತನ ಜೊತೆ ಸ್ನೇಹ ಬೆಳೆಸಿ ಬಬಿತ್‌ನನ್ನು ಕಡೆಗಣಿಸಿದ್ದರು. ಕೆಲವು ತಿಂಗಳಿಂದ ಯುವತಿ ರಾಹುಲ್‌ ಜತೆ ತಿರುಗಾಡುವುದನ್ನು ನೋಡಿದ್ದ ಬಬಿತ್‌ ಆಕ್ಷೇಪ ವ್ಯಕ್ತಪಡಿಸಿದ್ದ.ಆರು ತಿಂಗಳ ಹಿಂದೆ ಈತ ಯುವತಿ ಮನೆಗೂ ಬಂದು ತನ್ನ ಕರೆಗಳನ್ನು ಸ್ವೀಕರಿಸುತ್ತಿಲ್ಲ ಎಂದು ಗಲಾಟೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಯುವತಿ 7ರಂದು ರಾಹುಲ್‌ ಮನೆಯಲ್ಲಿದ್ದುದ್ದನ್ನು ಬಬಿತ್‌ ನೋಡಿದ. ಆ ಸಮಯದಲ್ಲಿ ಮೂವರಿಗೂ ಜಗಳವಾಯಿತು. ರಾಹುಲ್‌ ಯುವತಿ ಮೇಲೆ ಹಲ್ಲೆ ಮಾಡಿದ. ಆನಂತರ ಯುವತಿ ಬಬಿತ್‌ ಜತೆ ಅವನ ಮನೆಗೆ ಹೋಗಿದ್ದರು. ಅಲ್ಲೂ ವಾಗ್ವಾದ ನಡೆದು, ಬಬಿತ್‌ ವಿದ್ಯಾರ್ಥಿನಿಗೆ ಹೆಲ್ಮೆಟ್‌ನಿಂದ ಹೊಡೆದಿದ್ದರಿಂದ ಕುಸಿದು ಬಿದ್ದರು ಎಂದು ಹೇಳಿದ್ದಾರೆ. ಸೋಲದೇವನಹಳ್ಳಿಪೊಲೀಸರು ಬಬಿತ್‌ ಮತ್ತು ರಾಹುಲ್‌ನನ್ನು ವಶಕ್ಕೆ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.