ADVERTISEMENT

‘ಅಕ್ರಮಕ್ಕೆ ಆರು ಆಯುಕ್ತರ ಲೋಪ ಕಾರಣ’

ಮೂರು ವಲಯಗಳಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 21:59 IST
Last Updated 13 ಮಾರ್ಚ್ 2020, 21:59 IST
   

ಬೆಂಗಳೂರು: ಮಲ್ಲೇಶ್ವರ, ರಾಜರಾಜೇಶ್ವರಿನಗರ ಹಾಗೂ ಗಾಂಧಿನಗರ ವಲಯಗಳಲ್ಲಿರುವ ನಡೆದಿರುವ ಭ್ರಷ್ಟಾಚಾರ ಹಾಗೂ ಅದರ ತನಿಖೆ ವಿಳಂಬಕ್ಕೆ ಆಗಿನ ಪಾಲಿಕೆಯ ಆಯುಕ್ತರ ಲೋಪವೂ ಕಾರಣ ಎಂದು ವಿಧಾನಮಂಡಲದ ಅಧೀನ ಶಾಸನ ರಚನಾ ಸಮಿತಿ ಬೊಟ್ಟು ಮಾಡಿದೆ.

ಸಮಿತಿಯ 48ನೇ ವರದಿಯನ್ನು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಲಾಯಿತು. ಆರು ಆಯುಕ್ತರು, 10 ಜಂಟಿ ಆಯುಕ್ತರು, ಆರು ಸಿಬ್ಬಂದಿ ವರ್ಗ ಹಾಗೂ 76 ಎಂಜಿನಿಯರ್‌ ಸಮರ್ಪಕವಾಗಿ ಜವಾಬ್ದಾರಿ ನಿರ್ವಹಣೆ ಮಾಡಿಲ್ಲದಿರುವುದು ಕಂಡುಬಂದಿದೆ. ಕರ್ತವ್ಯಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.

ಮೂರು ವಲಯಗಳಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ‘ಬ್ರಹ್ಮಾಂಡ ಭ್ರಷ್ಟಾಚಾರ’ ಹೆಸರಿನಲ್ಲಿ 11 ವರದಿಗಳನ್ನು ಪ್ರಕಟಿಸಿತ್ತು. ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿ ಶಿಫಾರಸುಗಳನ್ನು ಆಧರಿಸಿ ವರದಿಗಳನ್ನು ‍ಪ್ರಕಟಿಸಲಾಗಿತ್ತು. ಆ ಬಳಿಕ ಪಾಲಿಕೆ ಎಚ್ಚೆತ್ತಿತ್ತು.

ADVERTISEMENT

ಅಧಿಕಾರಿಗಳ ಧೋರಣೆಗೆ ತೀವ್ರ ಆಕ್ಷೇಪ: ಅಕ್ರಮಗಳ ಬಗ್ಗೆ ಪರಿಶೀಲಿಸಲು ಮಾಹಿತಿಗಳನ್ನು ಒದಗಿಸುವಂತೆ ಇಲಾಖಾಧಿಕಾರಿಗಳಿಗೆ ಹಲವು ಬಾರಿ ಸೂಚಿಸಲಾಗಿತ್ತು. ಆದರೆ, ಅಧಿಕಾರಿಗಳು ಅನಗತ್ಯ ವಿಳಂಬ ಧೋರಣೆ ತೋರಿದ್ದಾರೆ. ಈ ಧೋರಣೆ ಸರಿಯಲ್ಲ ಎಂದು ಸಮಿತಿ ಆಕ್ಷೇಪಿಸಿದೆ. ನಾಗಮೋಹನದಾಸ್‌ ಸಮಿತಿ ಹಾಗೂ ವಿಶೇಷ ಲೆಕ್ಕಪರಿಶೋಧನಾ ತಂಡಕ್ಕೂ ಅಗತ್ಯ ಮಾಹಿತಿಗಳನ್ನು ಅಧಿಕಾರಿಗಳು ನೀಡಿಲ್ಲ. ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಸೂಚಿಸಿದೆ.

ಅವ್ಯವಹಾರದಲ್ಲಿ ಭಾಗಿಯಾಗಿ ಸರ್ಕಾರಕ್ಕೆ ನಷ್ಟ ಉಂಟು ಮಾಡಿದ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಂದ ನಷ್ಟದ ಮೊತ್ತ ವಸೂಲಿ ಮಾಡಬೇಕು. ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆಗಳನ್ನು ದಾಖಲಿಸಬೇಕು. ಸರ್ಕಾರದ ಯಾವುದೇ ಕಾಮಗಾರಿಗಳನ್ನು ನಿರ್ವಹಿಸದಂತೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಸಮಿತಿ ನಿರ್ದೇಶನ ನೀಡಿದೆ.

2008–09ನೇ ಸಾಲಿನಿಂದ 2011–12ನೇ ಸಾಲಿನ ವರೆಗಿನ ವಾರ್ಷಿಕ ಲೆಕ್ಕಪತ್ರಗಳು, ಅನುಮೋದಿತ ಬಜೆಟ್‌, ಕ್ರಿಯಾಯೋಜನೆಯ ಪಟ್ಟಿಗಳು, ಅನುದಾನ, ಧನಾದೇಶ, ಬ್ಯಾಂಕ್‌ ಪಾಸ್‌ ಶೀಟ್‌ಗಳು, ಲೆಕ್ಕ ಸಮನ್ವಯದ ದಾಖಲೆಗಳು, ಕಾಮಗಾರಿಗಳ ದಾಖಲೆಗಳಿಲ್ಲದ ಕಾರಣ ಶಾಸನಾತ್ಮಕವಾಗಿ ಆಗಿರುವ ನಷ್ಟದ ಮೊತ್ತವನ್ನು ತಿಳಿಯಲು ಸಾಧ್ಯವಾಗಿದೆ. ಅಂತಹ ದಾಖಲೆಗಳನ್ನು ನಿರ್ವಹಣೆ ಮಾಡುವ ಎಲ್ಲ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕು. ಈ ಎಲ್ಲ ದಾಖಲೆಗಳನ್ನು ಪಡೆದು ಅವುಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಆಗಿರುವ ಒಟ್ಟು ನಷ್ಟದ ಬಗ್ಗೆ ನಿಖರವಾಗಿ ತಿಳಿಯಲು ಲೆಕ್ಕಪರಿಶೋಧನೆ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

ಸಮಿತಿಯ ಶಿಫಾರಸುಗಳೇನು?

*ತಪ್ಪಿತಸ್ಥ ಅಧಿಕಾರಿಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದಲ್ಲಿ ಅವರ ವೇತನದಿಂದ ಹಾಗೂ ನಿವೃತ್ತಿ ಹೊಂದಿದ್ದಲ್ಲಿ ನಿವೃತ್ತಿ ವೇತನದಿಂದ ನಷ್ಟ ವಸೂಲಿ ಮಾಡಬೇಕು.

*ಪಾಲಿಕೆಯಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ತಪ್ಪಿತಸ್ಥ ಎಂಜಿನಿಯರ್‌ಗಳ ಬಡ್ತಿಯನ್ನು ಹಿಂಪಡೆದು ಅವರ ವಿರುದ್ಧ ಇಲಾಖಾ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಬೇಕು.

*ಸಿಐಡಿ ತನಿಖಾ ತಂಡ, ರಾಜೇಂದ್ರ ಕುಮಾರ್‌ ಕಠಾರಿಯಾ ಸಮಿತಿ, ಎಚ್‌.ಎನ್‌.ನಾಗಮೋಹನದಾಸ್‌ ಸಮಿತಿ ಹಾಗೂ ಲೆಕ್ಕಪರಿಶೋಧನಾ ಸಮಿತಿಯ ವರದಿಗಳ ಶಿಫಾರಸುಗಳನ್ವಯ ಅಗತ್ಯ ಕ್ರಮ ಕೈಗೊಳ್ಳಬೇಕು.

*ಪಾಲಿಕೆಯ ಕಾಮಗಾರಿಗಳ ಪರಿಶೀಲನೆಗೆ ತಾಂತ್ರಿಕ ವರ್ಗದವರನ್ನು ಒಳಗೊಂಡ ಜಾಗೃತ ದಳ ರಚಿಸಬೇಕು.

*ಪಾಲಿಕೆಯ ಕಾಮಗಾರಿಗಳ ನಿರ್ವಹಣೆಗೆ ಇರುವ ನೀತಿ, ನಿಯಮಗಳು ಹಾಗೂ ಬೈಲಾದ ಅಂಶಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಇವುಗಳ ಕಟ್ಟುನಿಟ್ಟಾಗಿ ಪಾಲಿಸಬೇಕು. ಅಗತ್ಯ ಬಿದ್ದರೆ ಅವುಗಳ ತಿದ್ದುಪಡಿ ಮಾಡಬೇಕು.

*ಪಾಲಿಕೆಯ ಕಾಮಗಾರಿಗಳಿಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿ ಬಳಿಕ ಕೆಲಸ ಆರಂಭಿಸಬೇಕು.

*ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್‌, ಬಿಎಂಆರ್‌ಸಿಎಲ್‌, ಬಿಡಿಎ, ಕೆಪಿಸಿಎಲ್‌ ಹಾಗೂ ಓಎಫ್‌ಸಿ ಸೇವಾ ಸಂಸ್ಥೆಗಳ ಜೊತೆಗೆ ಪಾಲಿಕೆ ಆಯುಕ್ತರು ಸಮನ್ವಯದಿಂದ ನಿರ್ವಹಿಸಲು ಏಕರೂಪದ ಕಾಯ್ದೆ ಜಾರಿಗೆ ತರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.