ADVERTISEMENT

ಅಪರೂಪದ ಕಾಯಿಲೆ: ಮಗುವಿಗೆ ತಾಯಿಯ ಪಿತ್ತಜನಕಾಂಗ ಕಸಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2021, 22:24 IST
Last Updated 8 ಜುಲೈ 2021, 22:24 IST
ಚೇತರಿಸಿಕೊಂಡ ಮಗುವಿನೊಂದಿಗೆ ಪಾಲಕರು
ಚೇತರಿಸಿಕೊಂಡ ಮಗುವಿನೊಂದಿಗೆ ಪಾಲಕರು   

ಬೆಂಗಳೂರು: ‘ಬಿಲಿಯರಿ ಅಟ್ರೆಸಿಯಾ’ ಎಂಬ ಕಾಯಿಲೆಯಿಂದ ಬಳಲುತ್ತಿದ್ದ 7 ತಿಂಗಳ ಮಗುವಿಗೆ ನಗರದ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ತಾಯಿಯ ಪಿತ್ತಜನಕಾಂಗವನ್ನು ಕಸಿ ಮಾಡಿದ್ದಾರೆ. ಇದರಿಂದಾಗಿ ಮಗು ಅಪಾಯದಿಂದ ಪಾರಾಗಿದೆ.

ಕುಂದಾಪುರದ ಅಬ್ದುಲ್ಲಾ ಹೆಸರಿನ ಮಗುವಿಗೆ ಜನಿಸಿದಾಗಲೇ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡಿತ್ತು. 5ನೇ ತಿಂಗಳಲ್ಲಿ ಮಗುವಿಗೆ ಯಕೃತ್ತಿನ ವೈಫಲ್ಯದ ಲಕ್ಷಣಗಳು ಗೋಚರಿಸಿದ್ದವು. ವಿವಿಧ ಪರೀಕ್ಷೆಗಳನ್ನು ನಡೆಸಿದಾಗ ಮಗುವಿಗೆ ಹುಟ್ಟಿನಿಂದಲೇ ಸಮಸ್ಯೆ ಇರುವುದು ದೃಢಪಟ್ಟಿತು. ಪಿತ್ತಜನಕಾಂಗದಿಂದ ಕರುಳಿನಲ್ಲಿ ಪಿತ್ತರಸವನ್ನು ಹರಿಸಬೇಕಾದ ಭಾಗವು ಮಗುವಿನಲ್ಲಿ ರೂಪುಗೊಂಡಿರಲಿಲ್ಲ. ಇದರಿಂದಾಗಿ ಪಿತ್ತರಸ ನಿರಂತರ ಪಿತ್ತಜನಕಾಂಗದಲ್ಲಿಯೇ ಸಂಗ್ರಹವಾಗಿ, ಅದು ರಕ್ತದಲ್ಲಿ ಸೇರುವ ಮೂಲಕ ಜಾಂಡೀಸ್‌ಗೆ ಕಾರಣವಾಗಿತ್ತು. ಅದೇ ರೀತಿ, ಪಿತ್ತಜನಕಾಂಗದ ಹಾನಿ ಮತ್ತು ಯಕೃತ್ತಿನ ವೈಫಲ್ಯಕ್ಕೆ ಕೂಡ ಕಾರಣವಾಯಿತು ಎಂದು ಆಸ್ಪತ್ರೆ ತಿಳಿಸಿದೆ.

ಮಗುವಿನ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ₹ 35 ಲಕ್ಷ ಹಣವನ್ನು ಆಸ್ಪತ್ರೆಯು ದಾನಿಗಳಿಂದ (ಕ್ರೌಡ್ ಫಂಡಿಂಗ್) ಸಂಗ್ರಹಿಸಿದೆ.

ADVERTISEMENT

‘ಮಗುವಿಗೆ ತಾಯಿಯೇ ಪಿತ್ತಜನಕಾಂಗವನ್ನು ದಾನ ಮಾಡಿದ್ದಾರೆ. 10 ಗಂಟೆಗಳ ಅವಧಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು. ಈಗ ಮಗು ಮತ್ತು ತಾಯಿ ಚೇತರಿಸಿಕೊಂಡಿದ್ದಾರೆ. ಮಗುವು ಆಸ್ಪತ್ರೆಗೆ ಬಂದಾಗ 5.8 ಕೆ.ಜಿ. ತೂಕವಿತ್ತು. ಅದರಲ್ಲಿ 3 ಕೆ.ಜಿ. ದೇಹದಲ್ಲಿನ ದ್ರವವಾಗಿತ್ತು. ಇದರಿಂದಾಗಿ ಮಗುವಿಗೆ ಉಸಿರಾಟ ನಡೆಸುವುದು ಕಷ್ಟವಾಗಿತ್ತು’ ಎಂದು ಆಸ್ಪತ್ರೆಯ ಪಿತ್ತಜನಕಾಂಗ ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ. ಸೋನಾಲ್ ಅಸ್ತಾನಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.