ಆರೋಪಿಗಳಿಂದ ವಶಪಡಿಸಿಕೊಂಡಿರುವ ನಗದು ಪ್ರದರ್ಶಿಸಿದ ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಹಾಗೂ ಅಧಿಕಾರಿಗಳು.
ಪ್ರಜಾವಾಣಿ ಚಿತ್ರ ಬಿ.ಕೆ.ಜನಾರ್ದನ್
ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಮಾಡಿದ ಪ್ರಕರಣದಲ್ಲಿ ಪೊಲೀಸ್ ಕಾನ್‌ಸ್ಟೆಬಲ್ ಸೇರಿ ಆರು ಮಂದಿಯನ್ನು ಬಂಧಿಸಿ, ₹6.29 ಕೋಟಿ ನಗದು ಜಪ್ತಿ ಮಾಡಲಾಗಿದೆ.
ಸಿಎಂಎಸ್ ಏಜೆನ್ಸಿ ವಾಹನದ ಮೇಲ್ವಿಚಾರಕ ಗೋಪಾಲ್ ಪ್ರಸಾದ್ ಅಲಿಯಾಸ್ ಗೋಪಿ, ಸಿಎಂಎಸ್ ಮಾಜಿ ಉದ್ಯೋಗಿ ಕ್ಸೇವಿಯರ್ ಅಲಿಯಾಸ್ ಪ್ರಜನ್, ಗೋವಿಂದಪುರ ಠಾಣೆಯ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ಅವರನ್ನು ಬೆಂಗಳೂರಿನಲ್ಲಿ ಹಾಗೂ ನವೀನ್, ರವಿ, ನೆಲ್ಸನ್ ಅವರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದೆ.
ನಗರದ ಹೊರವಲಯದಲ್ಲಿ ಆರೋಪಿಗಳು ಬಚ್ಚಿಟ್ಟಿದ್ದ ನಗದು ಜಪ್ತಿ ಮಾಡಿದ್ದು, ಚಿತ್ತೂರಿನಲ್ಲಿ ಇನೊವಾ ಕಾರು ವಶ ಪಡಿಸಿಕೊಳ್ಳಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ನಾಪತ್ತೆಯಾಗಿದ್ದು, ಅವರ ಪತ್ತೆಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವೆಂಬರ್ 19ರ ಮಧ್ಯಾಹ್ನ 1.20ರ ಸಮಯದಲ್ಲಿ ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿದ್ದ ಆರೋಪಿಗಳು, ಶಸ್ತ್ರ ತೋರಿಸಿ, ಬೆದರಿಸಿ ₹7.11 ಕೋಟಿ ದರೋಡೆ ಮಾಡಿದ್ದರು.
ಮೂರು ತಿಂಗಳಿಂದ ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳು, ಕೃತ್ಯಕ್ಕೆ 15 ದಿನಗಳ ಹಿಂದೆಯೇ ಸ್ಥಳ ನಿಗದಿ ಮಾಡಿದ್ದರು. ನಕಲಿ ನಂಬರ್ ಪ್ಲೇಟ್ ಅಳವಡಿಸಿದ ಕಾರಿನಲ್ಲಿ ಅಶೋಕ ಪಿಲ್ಲರ್ - ಜಯನಗರ - ಡೇರಿ ಸರ್ಕಲ್ ಮಾರ್ಗದಲ್ಲಿ ಬಂದು, ಸಿಎಂಎಸ್ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ, ತಾವು ಆರ್‌ಬಿಐ ಅಧಿಕಾರಿಗಳೆಂದು ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕೆಳಗಿಳಿಸಿದ್ದರು.
ನಂತರ ಮತ್ತೊಬ್ಬ ಆರೋಪಿ, ಕಸ್ಟೋಡಿಯನ್ ವಾಹನದೊಳಗೆ ಕುಳಿತು ಚಾಲಕನಿಗೆ ಡೇರಿ ಸರ್ಕಲ್‌ನತ್ತ ಚಲಾಯಿಸುವಂತೆ ಸೂಚಿಸಿದ್ದ. ಭದ್ರತಾ ಸಿಬ್ಬಂದಿ ಹಾಗೂ ಕಸ್ಟೋಡಿಯನ್ ಸಿಬ್ಬಂದಿಯನ್ನು ಕಾರಿನಲ್ಲಿ ಕರೆದೊಯ್ದಿದ್ದ ಆರೋಪಿಗಳು, ಅವರ ಮೊಬೈಲ್ ಕಿತ್ತುಕೊಂಡು, ಅವರನ್ನು ನಿಮ್ಹಾನ್ಸ್ ಬಳಿ ಕೆಳಗಿಳಿಸಿ ಪರಾರಿಯಾಗಿದ್ದರು ಎಂದು ಸಿಂಗ್ ವಿವರಿಸಿದರು.
ಕೃತ್ಯ ನಡೆದ ನಂತರ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗುವಷ್ಟರಲ್ಲಿ ಒಂದೂವರೆ ತಾಸು ಆಗಿತ್ತು. ಮಾಹಿತಿ ಲಭ್ಯವಾಗುತ್ತಿದ್ದಂತೆ, ಗಡಿಭಾಗದ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು, ನೆರೆ ರಾಜ್ಯಗಳ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ 11 ತಂಡಗಳನ್ನು ರಚಿಸಲಾಯಿತು. ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗೋವಾ, ತೆಲಂಗಾಣಕ್ಕೆ ತೆರಳಿ ಮಾಹಿತಿ ಕಲೆ ಹಾಕಲಾಯಿತು. ಪ್ರಕರಣ ಸಂಬಂಧ 30 ಮಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದರು.
ಸಿ.ಸಿ.ಟಿ.ವಿ ಕ್ಯಾಮೆರಾಗಳ ದೃಶ್ಯಾವಳಿ ಪರಿಶೀಲನೆ, ಬಾತ್ಮೀದಾರರ ಮಾಹಿತಿ ಹಾಗೂ ತಾಂತ್ರಿಕ ವಿಶ್ಲೇಷಣೆ ಆಧರಿಸಿ ಕಾರ್ಯಾಚರಣೆ ನಡೆಸಿದಾಗ, ಕೃತ್ಯದಲ್ಲಿ 6 ರಿಂದ 8 ಜನರು ಭಾಗಿಯಾಗಿರುವುದು ಗೊತ್ತಾಯಿತು. ಆಂಧ್ರಪ್ರದೇಶದ ಚಿತ್ತೂರಿನಲ್ಲಿ ಇನೊವಾ ಪತ್ತೆಯಾಯಿತು, ಅದಕ್ಕೆ ನಕಲಿ ನಂಬರ್ ಪ್ಲೇಟ್ ಬಳಸಲಾಗಿತ್ತು. ಖಚಿತ ಮಾಹಿತಿ ಆಧರಿಸಿ ಆರು ಮಂದಿಯನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ತಿಳಿಸಿದರು.
ವರ್ಷದ ಹಿಂದೆ ಸಂಭವಿಸಿದ ಅಪಘಾತದಿಂದಾಗಿ ಕ್ಸೇವಿಯರ್ ಕೆಲಸ ಬಿಟ್ಟಿದ್ದರೂ ಸಂಸ್ಥೆ ಸಿಬ್ಬಂದಿ ಜತೆ ಸಂಪರ್ಕದಲ್ಲಿದ್ದ. ಬಂಧಿತರು ಎಲ್ಲರೂ ಪರಿಚಿತರು. ಹಣ ಮಾಡುವ ಉದ್ದೇಶದಿಂದ ಕೃತ್ಯವೆಸಗಿದ್ದಾರೆ. ತನಿಖೆ ಪ್ರಗತಿಯಲ್ಲಿರುವ ಕಾರಣ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಕೃತ್ಯದಲ್ಲಿ ಭಾಗಿಯಾಗಿರುವ ಕಾನ್‌ಸ್ಟೆಬಲ್ ಅಣ್ಣಪ್ಪ ನಾಯ್ಕ್ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಹೇಳಿದರು.
ಆರೋಪಿಗಳನ್ನು ಡಿಸೆಂಬರ್ 1ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯ ಶನಿವಾರ ಆದೇಶ ಹೊರಡಿಸಿದೆ.
ಪ್ರಕರಣದ ಸವಾಲುಗಳು...
ಕೃತ್ಯದ ವೇಳೆ ಮೊಬೈಲ್ ಬಳಸದ ಆರೋಪಿಗಳು
ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲದ ಸ್ಥಳ ದರೋಡೆಗೆ ಆಯ್ಕೆ
ತನಿಖೆ ದಿಕ್ಕು ತಪ್ಪಿಸುವ ಸಲುವಾಗಿ ಹಲವು ಭಾಷೆಗಳಲ್ಲಿ ಸಂವಹನ
ಕೃತ್ಯಕ್ಕೆ ಬಳಸಿರುವ ಮೂರು ವಾಹನಗಳಿಗೂ ನಕಲಿ ನಂಬರ್ ಪ್ಲೇಟ್ ಬಳಕೆ
ದರೋಡೆಯಾದ ಹಣದ ನೋಟುಗಳ ಸರಣಿ ಸಂಖ್ಯೆಗಳ ದಾಖಲಾತಿ ಇಲ್ಲದ ಕಾರಣ ಗುರುತಿಸುವುದು ಕಷ್ಟ
ಸಿಎಂಎಸ್ ಏಜೆನ್ಸಿ ಲೋಪ: ಆರ್‌ಬಿಐಗೆ ಪತ್ರ
ಸಿಎಂಎಸ್ ಏಜೆನ್ಸಿಯು ಆರ್‌ಬಿಐ ಮಾರ್ಗಸೂಚಿ ಪಾಲಿಸದಿರುವುದು ತನಿಖೆ ವೇಳೆ ಗೊತ್ತಾಗಿದೆ. ಹೀಗಾಗಿ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಆರ್‌ಬಿಐಗೆ ಪತ್ರ ಬರೆಯಲಾಗುವುದು ಹಾಗೂ ಪ್ರಕರಣದಲ್ಲಿ ಸಿಎಂಎಸ್ ಸಂಸ್ಥೆ ಸಿಬ್ಬಂದಿಯ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದು ಸೀಮಾಂತ್ ಕುಮಾರ್ ಸಿಂಗ್ ತಿಳಿಸಿದರು.
ಹಣ ಸಾಗಿಸುವ ವಾಹನದಲ್ಲಿ ಚಾಲಕ ಹೊರತುಪಡಿಸಿ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಇಬ್ಬರು ಕಸ್ಟೋಡಿಯನ್ ಸಿಬ್ಬಂದಿ ಇರಬೇಕು. ಹಣ ಇರುವ ವಾಹನ ಒಂದೇ ಸಮಯ ಒಂದೇ ಮಾರ್ಗವನ್ನು ಪದೇ ಪದೇ ಬಳಸಬಾರದು.
ಸಿಬ್ಬಂದಿಯು ಹಣ ನಿರ್ವಹಣೆಯ ಕುರಿತು ತರಬೇತಿ ಪಡೆದಿರಬೇಕು ಸಿಬ್ಬಂದಿಯ ಹಿನ್ನೆಲೆಯ ಕುರಿತು ಪರಿಶೀಲನೆ ಆಗಿರಬೇಕು. ಕಂಪನಿಯ ಯಾವುದಾದರೂ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೆ ಪೊಲೀಸರಿಗೆ ಮಾಹಿತಿ ನೀಡಿರಬೇಕು. ಆದರೆ ಸಿಎಂಎಸ್ ಸಂಸ್ಥೆಯಿಂದ ಕೆಲ ಲೋಪದೋಷ ಆಗಿರುವುದು ಕಂಡು ಬಂದಿದೆ ಎಂದರು.
11 ತಂಡ 200 ಸಿಬ್ಬಂದಿ ಕಾರ್ಯಾಚರಣೆ
ಪ್ರಕರಣದ ತನಿಖೆಗಾಗಿ ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ಇಬ್ಬರು ಎಸಿಪಿಗಳು, ಪೊಲೀಸ್ ಇನ್‌ಸ್ಪೆಕ್ಟರ್‌ಗಳು ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗಳು, ಪೊಲೀಸರು ಸೇರಿ 200 ಸಿಬ್ಬಂದಿಯನ್ನೊಳಗೊಂಡ 11 ತಂಡಗಳನ್ನು ರಚಿಸಲಾಗಿತ್ತು. ಸಿದ್ದಾಪುರ ಜಯನಗರ ಸಿಸಿಬಿ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಘಟನೆ ನಡೆದ 54 ತಾಸಿನೊಳಗೆ ಆರೋಪಿಗಳ ಬಂಧನ ಹಾಗೂ ಹಣ ಜಪ್ತಿ ಮಾಡಿದ ತನಿಖಾ ತಂಡಕ್ಕೆ ₹5 ಲಕ್ಷ ನಗದು ಬಹುಮಾನವನ್ನು ಸೀಮಾಂತ್ ಕುಮಾರ್ ಸಿಂಗ್ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.