
ಸಿಎಂಎಸ್ ಏಜೆನ್ಸಿ ವಾಹನ
ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಹೊರಟಿದ್ದ ಸಿಎಂಎಸ್ ಏಜೆನ್ಸಿ ವಾಹನವನ್ನು ಆದಾಯ ತೆರಿಗೆ ಇಲಾಖೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ, ₹7.11 ಕೋಟಿ ದರೋಡೆ ನಡೆಸಿದ ಆರೋಪಿಗಳು ಪರಾರಿಯಾಗಿರುವ ಘಟನೆ ಬುಧವಾರ ಮಧ್ಯಾಹ್ನ 12ರಿಂದ 1 ಗಂಟೆಯ ನಡುವೆ ನಗರದಲ್ಲಿ ನಡೆದಿದೆ.
ಪ್ರಕರಣ ನಡೆದ ಕೆಲವೇ ತಾಸಿನಲ್ಲಿ ದರೋಡೆಕೋರರ ಸುಳಿವು ಪೊಲೀಸರಿಗೆ ಲಭಿಸಿದೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು ತನಿಖೆ ಚುರುಕುಗೊಂಡಿದೆ. ನಗರದಲ್ಲಿ ಹಗಲು ವೇಳೆ ನಡೆದ ದೊಡ್ಡ ದರೋಡೆ ಪ್ರಕರಣ ಇದಾಗಿದೆ.
ಸೌತ್ ಎಂಡ್ ಸರ್ಕಲ್ ಹಾಗೂ ಅಶೋಕ ಪಿಲ್ಲರ್ ನಡುವೆ ಇರುವ ಎಟಿಎಂಗೆ ಹಣ ಹಾಕಲೆಂದು ಜಿಜೆ 01 ಎಚ್‌ಟಿ 9173 ನೋಂದಣಿ ಸಂಖ್ಯೆಯ ವಾಹನವು ಹೊರಟಿತ್ತು. ಡೇರಿ ವೃತ್ತದ ಬಳಿ ಸಾಗುವಾಗ ಇನ್ನೊವಾ ಕಾರಿನಲ್ಲಿ ಬಂದಿದ್ದ ಎಂಟು ದರೋಡೆಕೋರರು, ಸಿಎಂಎಸ್ ವಾಹನವನ್ನು ಅಡ್ಡಗಟ್ಟಿ ‘ನಾವು ಆದಾಯ ತೆರಿಗೆ ಇಲಾಖೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಅಧಿಕಾರಿಗಳು’ ಎಂದು ಹೆದರಿಸಿದ್ದರು. ‘ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು’ ಎಂದು ಹೇಳಿ ಸಿಎಂಎಸ್ ವಾಹನದಲ್ಲಿದ್ದ ನಾಲ್ವರಲ್ಲಿ ಚಾಲಕನನ್ನು ಬಿಟ್ಟು ಮೂವರನ್ನು ಕೆಳಗಿಸಿ, ಇನ್ನೊವಾ ಕಾರಿಗೆ ಹತ್ತಿಸಿಕೊಂಡಿದ್ದರು. ಹಣವಿದ್ದ ವಾಹನವನ್ನು ಡೇರಿ ವೃತ್ತದ ಮೇಲ್ಸೇತುವೆಗೆ ಕೊಂಡೊಯ್ದು, ಅಲ್ಲಿ ಇನ್ನೊವಾ ಕಾರಿಗೆ ಆ ಹಣ ತುಂಬಿಸಿಕೊಂಡು ಪರಾರಿಯಾಗಿದ್ದಾರೆ. ಇನ್ನೊವಾದಲ್ಲಿದ್ದ ಸಿಎಂಎಸ್ ಏಜೆನ್ಸಿಯ ಮೂವರು ಸಿಬ್ಬಂದಿಯನ್ನು ಮಾರ್ಗ ಮಧ್ಯದಲ್ಲಿ ಬಿಟ್ಟುಹೋಗಿದ್ದಾರೆ.
ಮಾಹಿತಿ ತಿಳಿದ ಕೆಲವೇ ಕ್ಷಣಗಳಲ್ಲಿ ಸುದ್ದಗುಂಟೆಪಾಳ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಅಷ್ಟರಲ್ಲಿ ಎಂಟು ಮಂದಿ ದರೋಡೆಕೋರರು ಪರಾರಿ ಆಗಿದ್ದರು. ಹಲವು ಕಡೆ ಹಣ ತುಂಬಿದ ವಾಹನವನ್ನು ಹಿಂಬಾಲಿಸುತ್ತಿರುವುದು ಸಿ.ಸಿ.ಟಿ.ವಿ. ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಮೇಲ್ಸೇತುವೆಯಲ್ಲಿ ಸಿ.ಸಿ.ಟಿ.ವಿ. ಕ್ಯಾಮೆರಾಗಳು ಇಲ್ಲ. ಆರೋಪಿಗಳು ಸಾಕಷ್ಟು ಪೂರ್ವ ತಯಾರಿ ನಡೆಸಿ ಮೇಲ್ಸೇತುವೆಗೆ ವಾಹನ ಕೊಂಡೊಯ್ದು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಜೆ.ಪಿ. ನಗರದ ಎಚ್‌ಡಿಎಫ್‌ಸಿ ಬ್ಯಾಂಕ್ ಕರೆನ್ಸಿ ಚೆಸ್ಟ್‌ನಲ್ಲಿ ಹಣ ಡ್ರಾ ಮಾಡಿಕೊಂಡು ಟ್ರಂಕ್‌ಗಳಲ್ಲಿ ತುಂಬಿಕೊಂಡು ಎಟಿಎಂಗೆ ತುಂಬಲು ಹೋಗುತ್ತಿರುವಾಗ ದರೋಡೆ ನಡೆಸಲಾಗಿದೆ ಎಂದು ಸಿಎಂಎಸ್ ಇನ್ಫೊಸಿಸ್ಟಮ್‌ನ (ಎಚ್‌ಬಿಆರ್ ಲೇಔಟ್ ಶಾಖೆ) ವ್ಯವಸ್ಥಾಪಕ ವಿನೋದ್ ಚಂದ್ರಾಧರ್ ಅವರು ದೂರು ನೀಡಿದ್ದಾರೆ.
ಚಿತ್ರಗಳು: ಗುರು ನಾವಳ್ಳಿ
ಸಿಎಂಎಸ್ ಸಿಬ್ಬಂದಿಯ ಮೇಲೆ ಸಂಶಯ?:
ಹಣ ತುಂಬಿದ್ದ ವಾಹನದಲ್ಲಿ ಚಾಲಕ, ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಎಟಿಎಂಗೆ ಹಣ ತುಂಬುವ ವ್ಯಕ್ತಿಯಿದ್ದರು. ನಾಲ್ವರ ಪೈಕಿ ಒಬ್ಬ ಸಿಬ್ಬಂದಿ ದರೋಡೆಕೋರರಿಗೆ ಮಾಹಿತಿ ನೀಡಿರುವುದು ಗೊತ್ತಾಗಿದೆ. ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕೃತ್ಯ ನಡೆದ ಸ್ಥಳವನ್ನು ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದಾರೆ.
ಕೃತ್ಯ ನಡೆದ ತಕ್ಷಣವೇ ನಾಕಾಬಂದಿ ಹಾಕಲಾಗಿತ್ತು. ನಗರದ ಗಡಿಪ್ರದೇಶಗಳಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು. ಆದರೆ, ದರೋಡೆಕೋರರು ಮೊದಲೇ ಮಾರ್ಗವನ್ನು ನಿಗದಿಮಾಡಿಕೊಂಡು ಪರಾರಿ ಆಗಿದ್ದಾರೆ ಎಂದು ಗೊತ್ತಾಗಿದೆ.
ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಅವರು ಸಿದ್ದಾಪುರ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ಜನವರಿಯಲ್ಲಿ ಬೀದರ್‌ನಲ್ಲಿ ಇದೇ ಮಾದರಿಯಲ್ಲಿ ದರೋಡೆ ನಡೆದಿತ್ತು.
ಸಿಎಂಎಸ್ ಏಜೆನ್ಸಿಯ ನಾಲ್ವರ ವಿಚಾರಣೆ
‘ಸಿಎಂಎಸ್ ಏಜೆನ್ಸಿಯ ವಾಹನದ ಚಾಲಕ ಬಿನೋದ್ ಕುಮಾರ್ ಭದ್ರತಾ ಸಿಬ್ಬಂದಿ ರಾಜಣ್ಣ ಹಾಗೂ ತಮ್ಮಯ್ಯ ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಅಫ್ತಾಬ್ ಇದ್ದರು. ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಾಲ್ವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಇವರ ಹೇಳಿಕೆಯಲ್ಲಿ ಕೆಲವು ಗೊಂದಲಗಳಿವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಜಯನಗರ ಜೆ.ಪಿ. ನಗರ ಸಿದ್ದಾಪುರ ಸುದ್ದಗುಂಟೆಪಾಳ್ಯ ಠಾಣೆಯ ಪೊಲೀಸರ ನೇತೃತ್ವದಲ್ಲಿ ತನಿಖೆ ಚುರುಕುಗೊಂಡಿದೆ.
ದರೋಡೆಕೋರರು ಸಾಗಿರುವ ಮಾರ್ಗ
ಕೃತ್ಯ ಎಸಗಿದ ಬಳಿಕ ದರೋಡೆಕೋರರು ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಸಿಕ್ಕಿದೆ. ಡೇರಿ ವೃತ್ತ ಕೋರಮಂಗಲ ದೊಮ್ಮಲೂರು ಮಾರತ್‌ಹಳ್ಳಿ ವೈಟ್ ಫೀಲ್ಡ್ ಮಾರ್ಗವಾಗಿ ಹೊಸಕೋಟೆ ಕಡೆ ತೆರಳಿರುವ ಮಾಹಿತಿ ಲಭ್ಯವಾಗಿದೆ. ದರೋಡೆಕೋರರಿದ್ದ ಕಾರು ಸಾಗುತ್ತಿರುವುದು ಟೋಲ್‌ನಲ್ಲಿ ಅಳವಡಿಸಿರುವ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಕೃತ್ಯ
ಇನ್ನೊವಾ ಕಾರಿಗೆ ನಕಲಿ ನಂಬರ್ ಪ್ಲೇಟ್ ಅಳವಡಿಸಿಕೊಂಡು ದರೋಡೆಕೋರರು ಸಂಚು ನಡೆಸಿರುವುದು ಪತ್ತೆಯಾಗಿದೆ. ಕೆಎ03 ಎನ್‌ಸಿ 8052 ನೋಂದಣಿ ಸಂಖ್ಯೆ ವಾಹನದಲ್ಲಿ ಬಂದ ಆರೋಪಿಗಳು ಕೃತ್ಯ ಎಸಗಿದ್ದಾರೆ. ಆದರೆ ಈ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಿದಾಗ ಮೂಲ ಸಂಖ್ಯೆಯು ಮಾರುತಿ ಕಾರಿಗೆ ಸಂಬಂಧಿಸಿದ್ದಾಗಿದೆ ಎಂಬುದು ಗೊತ್ತಾಗಿದೆ. ಹಲವು ದಿನಗಳಿಂದ ಸಂಚು ರೂಪಿಸಿ ದರೋಡೆ ನಡೆಸಿರುವ ಸಾಧ್ಯತೆಯಿದೆ. ಸಿಎಂಎಸ್ ಸಿಬ್ಬಂದಿಯ ಮೊಬೈಲ್ ಜಪ್ತಿ ಮಾಡಲಾಗಿದೆ. ಕರೆಗಳ ವಿವರ ಪರಿಶೀಲನೆ ನಡೆಸಲಾಗುತ್ತಿದೆ. ಶಂಕಿತರ ಜತೆಗೆ ಚಾಲಕ ಸಂಪರ್ಕದಲ್ಲಿರುವುದು ಪತ್ತೆಯಾಗಿದೆ ಎಂದು ಮೂಲಗಳು ಹೇಳಿವೆ.
ಚಾಲಕ ಸರಿಯಾದ ಮಾಹಿತಿ ನೀಡುತ್ತಿಲ್ಲ. ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇಬ್ಬರು ಡಿಸಿಪಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.- ಸೀಮಾಂತ್‌ಕುಮಾರ್ ಸಿಂಗ್, ನಗರ ಪೊಲೀಸ್ ಕಮಿಷನರ್
ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಸುಳಿವು ಸಿಕ್ಕಿದೆ. ಶೀಘ್ರದಲ್ಲೇ ಬಂಧಿಸುತ್ತೇವೆ. ಎಟಿಎಂಗಳಿಗೆ ಹಣ ಹಾಕುವ ಮಾಹಿತಿಯನ್ನು ಆರೋಪಿಗಳಿಗೆ ನೀಡಿರುವುದು ಗೊತ್ತಾಗಿದೆ.- ಜಿ.ಪರಮೇಶ್ವರ, ಗೃಹ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.