
ಬೆಂಗಳೂರು: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ಹೋಗುತ್ತಿದ್ದ ಸಿಎಂಎಸ್ ಏಜೆನ್ಸಿ ವಾಹನ ಅಡ್ಡಗಟ್ಟಿ ₹7.11 ಕೋಟಿ ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಇದರೊಂದಿಗೆ ಬಂಧಿತರ ಸಂಖ್ಯೆ 9ಕ್ಕೆ ಏರಿದೆ.
ಪ‍್ರಕರಣ ಸಂಬಂಧ ಈವರೆಗೆ ₹6.55 ಕೋಟಿ ನಗದು ಜಪ್ತಿ ಮಾಡಲಾಗಿದ್ದು, ಬಾಕಿ ₹56 ಲಕ್ಷ ನಗದು ಪತ್ತೆ ಕಾರ್ಯ ಮುಂದುವರಿದಿದೆ.
ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಂಗಳೂರಿನಲ್ಲಿ ದಿನೇಶ್ ಹಾಗೂ ಚೆನ್ನೈನಲ್ಲಿ ಜಿನೇಶ್ ಅವರನ್ನು ಬಂಧಿಸಿದ್ದಾರೆ. ದರೋಡೆ ಸಂಚಿನಲ್ಲಿ ಭಾಗಿಯಾಗಿದ್ದ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರ ಪಾತ್ರದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಇಬ್ಬರಿಂದ ₹26 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ವಿಶೇಷ ತಂಡಗಳು ಕಾರ್ಯಾಚರಣೆ ಮುಂದುವರಿಸಿದ್ದು, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಈಗಾಗಲೇ ಏಳು ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡಿರುವ ಪೊಲೀಸರು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಡಿಸಿಪಿ, ಎಸಿಪಿ ನೇತೃತ್ವದಲ್ಲಿ ಪ್ರತ್ಯೇಕ ವಿಚಾರಣೆ ನಡೆಸಿ, ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗುತ್ತಿದೆ.
ಸಂಚಿನ ಸೂತ್ರಧಾರ ಯಾರು?: ಪ್ರಮುಖ ಆರೋಪಿಗಳ ಜತೆ ನಿಮಗೆ ಹಣಕಾಸಿನ ವ್ಯವಹಾರವಿತ್ತಾ? ಎಷ್ಟು ದಿನಗಳಿಂದ ಪರಿಚಯ? ದರೋಡೆ ಮಾಡಲು ಕಾರಣವೇನು? ಉಳಿದ ಹಣ ಎಲ್ಲಿ ಬಚ್ಚಿಡಲಾಗಿದೆ ಎಂಬ ಪ್ರಶ್ನೆಗಳನ್ನು ಪ್ರತ್ಯೇಕವಾಗಿ ಕೇಳಿ, ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಆರೋಪಿಗಳು ಕರೆ ವಿವರಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈವರೆಗೂ 30ಕ್ಕೂ ಅಧಿಕ ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಕಳುಹಿಸಲಾಗಿದೆ. ಪ್ರಮುಖ ಆರೋಪಿ ರವಿ ಅವರ ಪತ್ನಿಯ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಅವರ ಕುಟುಂಬದ ಸದಸ್ಯರನ್ನು ಕರೆಸಿ, ಹೇಳಿಕೆ ಪಡೆದುಕೊಳ್ಳಲಾಗಿದೆ. ಪ್ರಕರಣದಲ್ಲಿ ಸಿಎಂಎಸ್ ಏಜೆನ್ಸಿ ಸಿಬ್ಬಂದಿ ಪಾತ್ರದ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಂಡ ಬಳಿಕ ಸ್ಥಳ ಮಹಜರಿಗೆ ಕರೆದೊಯ್ಯಲಾಗುವುದು ಎಂದು ಮೂಲಗಳು ಹೇಳಿವೆ.
ದರೋಡೆಯಾದ ಹಣದ ನೋಟುಗಳ ಸರಣಿ ಸಂಖ್ಯೆಗಳನ್ನು ಬ್ಯಾಂಕ್‌ನಿಂದ ಪಡೆದುಕೊಂಡಿದ್ದು, ಕಾಣೆಯಾಗಿರುವ ಸಂಖ್ಯೆಗಳ ನೋಟ್‌ಗಳನ್ನು ಪತ್ತೆ ಮಾಡಲು ಪೊಲೀಸರು ಮುಂದಾಗಿದ್ದಾರೆ.
ಘಟನೆ ಬಳಿಕ ಬಳಿಕ ಸಿಎಂಎಸ್ ಕಂಪನಿಯು ಎಚ್ಚರಿಕೆ ವಹಿಸಿದ್ದು, ಮೂರು ಶಾಖೆಗಳಿಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಎಟಿಎಂ ಕೇಂದ್ರಗಳಿಗೆ ಹಣ ಸಾಗಿಸುವ ವಾಹನಕ್ಕೆ ಬಿಗಿ ಭದ್ರತೆ ನೀಡಲಾಗಿದ್ದು, ಚಾಲಕ, ಇಬ್ಬರು ಕಸ್ಟೋಡಿಯನ್, ಗನ್‌ಮೆನ್ ಒದಗಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.