ಬೆಂಗಳೂರು : ನಾಲ್ವರಿಗೆ ಚಾಕು ಇರಿದಿದ್ದ ರೌಡಿ ಕದಂಬನನ್ನು ಎಂಟು ದಿನ ಕಸ್ಟಡಿಗೆ ಪಡೆದಿರುವ ಇಂದಿರಾನಗರ ಪೊಲೀಸರು, ವಿಚಾರಣೆ ತೀವ್ರಗೊಳಿಸಿದ್ದಾರೆ.
‘ದ್ವಿಚಕ್ರ ವಾಹನ ಸವಾರ ಹೊರತುಪಡಿಸಿ ಉಳಿದ ಮೂವರಿಗೆ ಯಾಕೆ ಚಾಕು ಇರಿದೆ ಎಂದು ಗೊತ್ತಾಗಿಲ್ಲ’ ಎಂದು ಹೇಳಿಕೆ ನೀಡಿದ್ದಾನೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಶುದ್ಧ ನೀರು ಘಟಕದಿಂದ ಕುಡಿಯಲು ನೀರು ತರಲು ಬೈಕ್‌ನಲ್ಲಿ ಹೋಗುತ್ತಿದ್ದ ಜಸ್ವಂತ್ ಅವರನ್ನು ಅಡ್ಡಗಟ್ಟಿ, ಡ್ರಾಪ್ ಕೇಳಿದೆ. ಎಡಕ್ಕೆ ಹೋಗುವಂತೆ ಸೂಚಿಸಿದರೂ ಬಲಕ್ಕೆ ಹೋಗಿದ್ದರು. ಹೀಗಾಗಿ, ಚಾಕುವಿನಿಂದ ಅವರ ಮೇಲೆ ಹಲ್ಲೆ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಈ ಹಿಂದೆ ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇದೇ ರೀತಿಯ ಹೇಳಿಕೆ ನೀಡಿದ್ದ. ಹಾಗಾಗಿ ಕಳೆದ ವರ್ಷ ಈತನನ್ನು ರೌಡಿಪಟ್ಟಿಗೆ ಸೇರಿಸಲಾಗಿತ್ತು. ಈತನ ಸಹೋದರ ವಿಷ್ಣು ಕೂಡ ರೌಡಿಶೀಟರ್ ಆಗಿದ್ದು, ಈ ಹಿಂದೆ ಪೂರ್ವ ವಿಭಾಗ ಠಾಣೆಯವರು ಗಡೀಪಾರು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರುವರಿ 8ರ ರಾತ್ರಿ 20 ನಿಮಿಷದ ಅವಧಿಯಲ್ಲಿ ಇಂದಿರಾನಗರ ಮೂರನೇ ಅಡ್ಡರಸ್ತೆಯಲ್ಲಿ ಜಸ್ವಂತ್, ತಮ್ಮಯ್ಯ, ಮಹೇಶ್ ಸೀತಾಪತಿ ಹಾಗೂ ದೀಪಕ್ ಕುಮಾರ್ ಎಂಬುವವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ ಕದಂಬನನ್ನು ಹೊಸಕೋಟೆಯಲ್ಲಿ ಬಂಧಿಸಲಾಗಿತ್ತು. ಪರಾರಿಯಾಗಲು ಸಹಕರಿಸಿದ್ದ ತಂದೆ ಸುರೇಶ್, ಸಹೋದರ ವಿಷ್ಣು ಹಾಗೂ ಅಕ್ಕ ಸುಶ್ಮಿತಾ ಅವರನ್ನು ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.