ADVERTISEMENT

ಬೆಂಗಳೂರು | ಉದ್ಯಮಿ ಕೊಲೆಗೆ ಯತ್ನ: ಮೂವರ ಸೆರೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:28 IST
Last Updated 29 ಜೂನ್ 2025, 15:28 IST
<div class="paragraphs"><p>ಬಂಧನ </p></div>

ಬಂಧನ

   

ಬೆಂಗಳೂರು: ಕೆಲಸದಿಂದ ತೆಗೆದು ಹಾಕಿರುವುದು ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಮಾಲೀಕನನ್ನು ಕೊಲೆ ಮಾಡಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಹಲಸೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಮೂಲದ ಉದ್ಯಮಿ ಸುಚಿತ್ ಜಯರಾಜ್ ಷಾ ಅವರ ದೂರಿನ ಮೇರೆಗೆ ಕುದುರೆ ತರಬೇತುದಾರ ಜಸ್ವೀರ್ ಸಿಂಗ್, ಈತನ ಸಹೋದರ ದಲಬೀರ್ ಸಿಂಗ್ ಹಾಗೂ ಸಹಾಯಕ ಸನ್ನಿ ಅವರನ್ನು ಬಂಧಿಸಲಾಗಿದೆ.

ADVERTISEMENT

ಕುದುರೆ ರೇಸ್ ಹವ್ಯಾಸವಿದ್ದ ಕಾರಣ ಸುಚಿತ್ ಅವರು ರೇಸ್ ಕುದುರೆ ಖರೀದಿಸಿದ್ದರು. ಈ ಕುದುರೆಗೆ ಆರೋಪಿ ಜಸ್ವೀರ್ ಸಿಂಗ್ ತರಬೇತುದಾರರಾಗಿದ್ದರು. ಅವರು ತರಬೇತಿ ನೀಡಿದ್ದ ಕುದುರೆಗಳು ಹಲವು ರೇಸ್‌ಗಳಲ್ಲಿ ಗೆಲುವು ಪಡೆದಿದ್ದವು ಎನ್ನಲಾಗಿದೆ. ಸುಚಿತ್ ಅವರು ಪಂಜಾಬ್ ಸ್ಟಡ್ ಫಾರ್ಮ್‌ನಿಂದ ಕುದುರೆ ಖರೀದಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಜಸ್ವೀರ್ ಸಿಂಗ್ ಹಾಗೂ ಉದ್ಯಮಿ ನಡುವೆ ಹಣಕಾಸಿನ ವ್ಯವಹಾರ ನಡೆದಿತ್ತು. ಈ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದು, ಜಸ್ವೀರ್ ಸಿಂಗ್‌ನನ್ನು ಸುಚಿತ್ ಕೆಲಸದಿಂದ ತೆಗೆದು ಹಾಕಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉದ್ಯಮಿ ವಿರುದ್ಧ ಜಸ್ವೀರ್‌ ಸಿಂಗ್ ಕೋಪಗೊಂಡಿದ್ದರು. ಇತ್ತೀಚೆಗೆ ಉದ್ಯಮಿ ಕುದುರೆ ರೇಸ್‌ಗೆಂದು ತನ್ನ ಸ್ನೇಹಿತನ ಜೊತೆಗೆ ಬೆಂಗಳೂರಿಗೆ ಬಂದು ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಈ ವಿಚಾರ ತಿಳಿದ ಜಸ್ವೀರ್ ಸಿಂಗ್, ಸುಚಿತ್ ಅವರು ಉಳಿದುಕೊಂಡಿದ್ದ ಹೊಟೇಲ್‌ಗೆ ತನ್ನ ಸಹೋದರ ಹಾಗೂ ಸಹಾಯಕನನ್ನು ಕಳಿಸಿದ್ದರು. ಆರೋಪಿಗಳಿಬ್ಬರು, ಉದ್ಯಮಿಯನ್ನು ಪಾರ್ಕಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು. ನಂತರ ಸ್ಕ್ರೂಡ್ರೈವರ್‌ನಿಂದ ಚುಚ್ಚಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಸುಚಿತ್ ತಪ್ಪಿಸಿಕೊಂಡಿದ್ದರು. ಚಿಕಿತ್ಸೆ ಪಡೆದ ಬಳಿಕ ಆರೋಪಿಗಳ ವಿರುದ್ಧ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.