ADVERTISEMENT

ರಾಜಭವನ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನ

ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ‍

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2025, 0:07 IST
Last Updated 14 ಏಪ್ರಿಲ್ 2025, 0:07 IST
ರಾಜಭವನ-ಸಂಗ್ರಹ ಚಿತ್ರ
ರಾಜಭವನ-ಸಂಗ್ರಹ ಚಿತ್ರ   

ಬೆಂಗಳೂರು: ಪತ್ನಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ರಾಜಭವನ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಾನುವಾರ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಜುಹೆಲ್‌ ಅಹ್ಮದ್ ಹೆಬ್ಬಾಳದ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿದ್ದಾರೆ. ಪತ್ನಿ ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದಾರೆ.

ರಾಜಕಾರಣಿಯೊಬ್ಬರ ಹೇಳಿಕೆ ಪಡೆಯಲು ಸಂಜೆ 4.30ರ ಸುಮಾರಿಗೆ ಮಾಧ್ಯಮ ಪ್ರತಿನಿಧಿಗಳು ರಾಜಭವನದ ಬಳಿ ತೆರಳಿದ್ದರು. ಅದೇ ವೇಳೆ ಅಲ್ಲಿಗೆ ಬಂದ ಜುಹೆಲ್‌, ಏಕಾಏಕಿ ಪ್ಲಾಸ್ಟಿಕ್ ಬಾಟಲಿಯಲ್ಲಿ ತಂದಿದ್ದ ಪೆಟ್ರೋಲ್ ಅನ್ನು ಮೈ ಮೇಲೆ ಸುರಿದುಕೊಂಡರು. ಇದನ್ನು ನೋಡಿದ ಪತ್ರಕರ್ತರು ಬಾಟಲಿಯನ್ನು ಅವರಿಂದ ಕಸಿದುಕೊಂಡರು.

ನಂತರ ಸ್ಥಳೀಯರು ಅಹ್ಮದ್ ಮೇಲೆ ನೀರು ಸುರಿದರು. ಬಳಿಕ ಅವರನ್ನು ಪೊಲೀಸ ವಶಕ್ಕೆ ಒಪ್ಪಿಸಿದರು. ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ ಆರೋಪದಡಿ ವಿಧಾನಸೌಧ ಠಾಣೆ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅಹ್ಮದ್, ‘ಪತ್ನಿ ಕಿರುಕುಳ ನೀಡುತ್ತಿರುವ ಬಗ್ಗೆ ಪೊಲೀಸರು ದೂರು ಸ್ವೀಕರಿಸಿಲ್ಲ. ನನ್ನ ಕೊಲೆ ಯತ್ನ ನಡೆದಿದೆ. ಆಕೆಯಿಂದ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ನನಗೆ ಬದುಕಲು ದಾರಿ ಇಲ್ಲ, ಸಾಯುವುದೊಂದೇ ದಾರಿ’ ಎಂದು ಬೇಸರ ಹೊರಹಾಕಿದ್ದಾರೆ. ಇದೇ ವೇಳೆ ಅಹ್ಮದ್, ತಾವು ಬರೆದಿರುವ ಮರಣ ಪತ್ರವನ್ನು ಮಾಧ್ಯಮದವರಿಗೆ ನೀಡಿದರು.

ಕೆಲ ದಿನಗಳ ಹಿಂದೆ ಪತ್ನಿ ನೀಡಿದ ದೂರು ಆಧರಿಸಿ ಚಿಕ್ಕಬಳ್ಳಾಪುರ ಪೊಲೀಸರು ಅಹ್ಮದ್ ವಿರುದ್ಧ
ಕೌಟುಂಬಿಕ ದೌರ್ಜನ್ಯ ಎಸಗಿದ ಆರೋಪದಡಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498–ಎ ಅಡಿ ಪ್ರಕರಣ ದಾಖಲಿಸಿದ್ದಾರೆ ಎಂಬುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.