
ಕೆ.ಆರ್.ಪುರ: ಬಿದರಹಳ್ಳಿ ಹೋಬಳಿಯ ಆವಲಹಳ್ಳಿ ಗ್ರಾಮದಲ್ಲಿ ಪುರಾತನ ಪ್ರಸಿದ್ಧ ಶ್ರೀ ಮುನೇಶ್ವರಸ್ವಾಮಿ ದೇವರ 224ನೇ ವಾರ್ಷಿಕೋತ್ಸವ ಮತ್ತು ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಮೂರು ದಿನಗಳಿಂದ ಗಣಪತಿ, ಬಸವೇಶ್ವರ, ಶನೇಶ್ವರ ಸ್ವಾಮಿ ದೇವರುಗಳಿಗೆ ಆರತಿ ಅಗ್ನಿ ಕುಂಡ ವಿಶೇಷ ಪೂಜೆಗಳು, ಹಾಗೂ ಮುನೇಶ್ವರಸ್ವಾಮಿ, ದೊಡ್ಡಮ್ಮ, ಸಪ್ಪಲಮ್ಮ, ಕಾಟೇರಮ್ಮ, ರೇಣುಕಾಯಲ್ಲಮ್ಮ ದೇವರುಗಳಿಗೆ ಆವಲಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಮಂಡೂರು, ವೀರೆನಹಳ್ಳಿ, ಚೀಮಸಂದ್ರ, ಬೋಮ್ಮೆನಹಳ್ಳಿ, ಕಟ್ಟಿಗೇನಹಳ್ಳಿ, ಚಿನ್ನಾಗೆನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರಿಂದ ಆರತಿ ನಡೆದವು.
ಬುಧವಾರ ಮದ್ಯಾಹ್ನ ಮುನೇಶ್ವರ ದೇವರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಮೇಡಹಳ್ಳಿ, ಹೊಸಕೋಟೆ, ಕೆಆರ್‌ಪುರ, ಭಟ್ಟರಹಳ್ಳಿ ರಾಮಮೂರ್ತಿನಗರ ಹಾಗೂ ಆವಲಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಬಾಳೆಹಣ್ಣನ್ನು ರಥದ ಮೇಲೆ ಎಸೆಯುವ ಮೂಲಕ ದೇವರಿಗೆ ಹರಕೆ ಸಲ್ಲಿಸಿದರು.
ಈ ಜಾತ್ರೆಯಲ್ಲಿ ವಿಶೇಷವಾಗಿ ಕೀಲು ಕುದುರೆ, ಡೊಳ್ಳು ಕುಣಿತ, ಗೊಂಬೆ ಕುಣಿತ, ವೀರಗಾಸೆ ಹಾಗೂ ಹಳ್ಳಿಸೊಗಡಿನ ಆರತಿ ದೀಪಗಳು ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ಸಾವಿರಾರು ಭಕ್ತರ ಗಮನ ಸೆಳೆದವು. ಅಲ್ಲದೆ ಕೆಲ ಗ್ರಾಮಸ್ಥರು ಜಾತ್ರೆಗೆ ಬಂದಿದ್ದ ಭಕ್ತರಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಿದರು. ದೊಡ್ಡಮ್ಮ, ಸಫಲಮ್ಮ, ಕಾಟೇರಮ್ಮ, ಎಲ್ಲಮ್ಮ, ವೀರಾಂಜನೇಯ ಸೇರಿದಂತೆ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.