ಬೆಂಗಳೂರು: ಶಂಕರಾಚಾರ್ಯರ ಹೆಸರಿನಲ್ಲಿ ಮುಂದಿನ ವರ್ಷದಿಂದ ಪ್ರಶಸ್ತಿ ನೀಡಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ಎಸ್.ತಂಗಡಗಿ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಆದಿ ಶಂಕರಾಚಾರ್ಯರ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಪ್ರಶಸ್ತಿ ಆಯ್ಕೆಗಾಗಿ ಸಮಿತಿಯನ್ನು ರಚಿಸಲಾಗುವುದು. ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ’ ಎಂದರು.
ಆದಿ ಶಂಕರಾಚಾರ್ಯರು ಅದ್ವೈತ ವೇದಾಂತದ ಅಡಿಪಾಯವನ್ನು ಹಾಕುವ ಮೂಲಕ ಸಾಂಸ್ಕೃತಿಕ ಮತ್ತು ಧಾರ್ಮಿಕ ಅವನತಿಯ ಸಮಯದಲ್ಲಿ ಹಿಂದೂ ಧರ್ಮವನ್ನು ಪುನರುಜ್ಜೀವನಗೊಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಆಧ್ಯಾತ್ಮಿಕ ಕ್ರಾಂತಿಯ ಹರಿಕಾರರಾಗಿದ್ದ ಶಂಕರಾಚಾರ್ಯರು ಭಾರತೀಯ ತತ್ವಶಾಸ್ತ್ರದ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಎಂಟನೇ ವಯಸ್ಸಿನಲ್ಲೇ ಅಪಾರ ಜ್ಞಾನ ಹೊಂದಿದ್ದರು. ತಮ್ಮ 32ನೇ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದರು ಎಂದು ಶ್ಲಾಘಿಸಿದರು.
ಧರ್ಮದ ಹೆಸರಿನಲ್ಲಿ ಹರಡುತ್ತಿರುವ ವಿವಿಧ ರೀತಿಯ ತಪ್ಪು ಕಲ್ಪನೆಗಳನ್ನು ಹೋಗಲಾಡಿಸವ ಕೆಲಸವನ್ನು ಶಂಕರಾಚಾರ್ಯರು ಮಾಡಿದ್ದರು. ಆದರೆ, ಇವತ್ತು ಧರ್ಮದ ಹೆಸರಿನಲ್ಲಿ ಕೆಲವರು ಯುವ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಈ ವಿಚಾರವಾಗಿ ಜನ ಜಾಗೃತರಾಗಬೇಕು ಎಂದು ಸಚಿವರು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಎಸ್.ರಘುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಕೆ.ಎಂ.ಗಾಯಿತ್ರಿ, ಬಿ.ಎಸ್.ದ್ವಾರಕಾನಾಥ್, ವಿ.ಆರ್.ಗೌರಿಶಂಕರ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.