ಬೆಂಗಳೂರು: ಶಬರಿಮಲೈ ಅಯ್ಯಪ್ಪಸ್ವಾಮಿ ದೇಗುಲಕ್ಕೆ ಮಹಿಳೆಯರಿಗೆ ಪ್ರವೇಶಿಸಲು ಅವಕಾಶ ನೀಡಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ನಗರದ ಭಕ್ತರು ಭಾನುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ರಾಮಚಂದ್ರಪುರದ ‘ಪಂದಳರಾಜನ್ ಅಯ್ಯಪ್ಪ ಭಕ್ತಮಂಡಳಿ ಸೇವಾ ಸಂಘ’ ಹಾಗೂ ಕೆ.ಆರ್.ಪುರದ ‘ಕ್ಷೇತ್ರ ಆಚಾರ್ ಸಂರಕ್ಷಣಾ ಸಮಿತಿ‘ ನೇತೃತ್ವದಲ್ಲಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ಕೆ.ಆರ್.ಪುರ, ಮಡಿವಾಳ, ಹೊಸೂರು ರಸ್ತೆ, ಬೊಮ್ಮನಹಳ್ಳಿ, ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಪ್ರತ್ಯೇಕವಾಗಿ ನಡೆಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಭಕ್ತರು, ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದು ಜೈಕಾರ ಹಾಕಿದರು. ಮಹಿಳೆಯರು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು.
ಸಂಘದ ಮುಖ್ಯಸ್ಥ ಟಿ.ಪರಮಶಿವಂ, ‘ಶಬರಿಮಲೈಯಲ್ಲಿ ಶತಮಾನಗಳಿಂದ ನಡೆದುಕೊಂಡು ಬಂದ ಪದ್ಧತಿ ಸಂಬಂಧ ನ್ಯಾಯಾಲಯ ನೀಡಿರುವ ತೀರ್ಪು ಭಕ್ತರ ಮನಸ್ಸಿಗೆ ನೋವುಂಟು ಮಾಡಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಪಂದಳರಾಜ ವಂಶಸ್ಥರಿಂದ ಯಾವುದೇ ಅಭಿಪ್ರಾಯ ಪಡೆಯದೇ ಯಾವುದೋ ಸರ್ಕಾರೇತರ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯವು ಈ ತೀರ್ಪು ನೀಡಿರುವುದು ಮನಸ್ಸಿಗೆ ನೋವುಂಟು ಮಾಡಿದೆ. ತೀರ್ಪು ಮರು ಪರಿಶೀಲನೆಗಾಗಿ ತಿರುವಾಂಕುರ ದೇವಸ್ಥಾನದ ಆಡಳಿತ ಮಂಡಳಿ, ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸದಿರುವುದು ಖಂಡನೀಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.