ADVERTISEMENT

ಅಯ್ಯಪ್ಪ ಕೊಲೆಗೆ ವಕೀಲನ ಸಲಹೆ!

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 20:08 IST
Last Updated 17 ಅಕ್ಟೋಬರ್ 2019, 20:08 IST
   

ಬೆಂಗಳೂರು:‘ಅಯ್ಯಪ್ಪ ದೊರೆ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿದ್ದ ಸುಧೀರ್ ಹಾಗೂ ಸೂರಜ್‌ಗೆ ವಕೀಲರೊಬ್ಬರು ಸಲಹೆ ನೀಡಿದ್ದರು ಎಂಬ ಮಾಹಿತಿ ಇದೆ. ಕೃತ್ಯದಲ್ಲಿ ವಕೀಲನ ಪಾತ್ರವೇನು ಎಂಬುದನ್ನು ತಿಳಿಯಲಾಗುತ್ತಿದೆ’ ಎಂದು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.

‘ಹತ್ಯೆಗೆ ಬಳಸಿದ್ದ ಮಾರಕಾಸ್ತ್ರಗಳು ಸೂರಜ್‌ ಮನೆಯಲ್ಲಿ ಸಿಕ್ಕಿದ್ದು, ಈಗಾಗಲೇ ಜಪ್ತಿ ಮಾಡಲಾಗಿದೆ. ಆತನ ಜೊತೆಗೆ ಹತ್ಯೆಗೆ ಸಹಕರಿಸಿದ್ದ ನಾಲ್ವರು ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.

‘ಕೆಲವೇ ವಾರಗಳಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಧುಕರ್ ಅವರ ಪಾಲಾಗುವ ಹಂತದಲ್ಲಿತ್ತು. ಒಂದೂವರೆ ತಿಂಗಳ ಹಿಂದೆ ಸೂರಜ್‌ನನ್ನು ತನ್ನ ಬಿ.ಟಿ.ಎಂ ಲೇಔಟ್‌ನಲ್ಲಿರುವ ಕಚೇರಿಗೆ ಕರೆಸಿದ್ದ ಸುಧೀರ್, ‘ವಿಶ್ವವಿದ್ಯಾಲಯ ನಮ್ಮ ಕೈಯಲ್ಲಿ ಉಳಿಯಬೇಕಾದರೆ ಅಯ್ಯಪ್ಪ ದೊರೆ ಹಾಗೂ ಮಧುಕರ್‌ನನ್ನು ಮುಗಿಸಬೇಕು’ ಎಂದಿದ್ದ.

ADVERTISEMENT

ಬಳಿಕವೇ ಸೂರಜ್, ಅವರಿಬ್ಬರನ್ನೂ ಹಿಂಬಾಲಿಸಲಾರಂಭಿಸಿದ್ದ’ ಎಂದರು. ‘ಸಂಚಿನಂತೆ ಅಯ್ಯಪ್ಪ ಅವರನ್ನು ಹತ್ಯೆ ಮಾಡಿದ್ದ ಆರೋಪಿಗಳು, ರಾತ್ರಿಯೇ ಸುಧೀರ್‌ ಮನೆಗೆ ಹೋಗಿದ್ದರು.‘ಒಬ್ಬನನ್ನು ಕೊಂದಾಯಿತು. ಇನ್ನೊಬ್ಬನನ್ನು (ಮಧುಕರ್) ಮುಗಿಸಿಬಿಡಿ’ ಎಂದು ಸುಧೀರ್ ಆರೋಪಿಗಳಿಗೆ ಹೇಳಿದ್ದ. ಮಧುಕರ್ ಮನೆಗೂ ಹೋಗಿದ್ದ ಆರೋಪಿಗಳು, ಅವರಿಗಾಗಿ ಮನೆ ಸಮೀಪ ಕಾದಿದ್ದರು. ಆದರೆ, ಅವರು ಮನೆಯಲ್ಲಿರಲಿಲ್ಲ. ಆರೋಪಿಗಳು ವಾಪಸ್ ಹೋಗಿದ್ದರು’ ಎಂದು ಭಾಸ್ಕರ್ ರಾವ್ ಹೇಳಿದರು.

‘ವಿವಾದವೇ ಹತ್ಯೆಗೆ ಕಾರಣವೆಂಬುದು ಗೊತ್ತಾಗುತ್ತಿದ್ದಂತೆ ಮಧುಕರ್ ಅವರಿಗೆ ಭದ್ರತೆ ನೀಡಲಾಗಿದೆ’ ಎಂದರು.

ಸಿಂಡಿಕೇಟ್ ಸದಸ್ಯ: ‘ಕೊಲೆಯಾದ ಅಯ್ಯಪ್ಪ, ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದರು. ಮಧುಕರ್ ಅವರನ್ನು ಸಹ ಕುಲಪತಿಯಾಗಿ ನೇಮಿಸಿಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಆರಂಭದಲ್ಲಿ ಸುಧೀರ್ ಪರ ಇದ್ದ ಅಯ್ಯಪ್ಪ, ಮಧುಕರ್ ವಿರುದ್ಧ ದಾವೆ ಹೂಡಲು ನೆರವು ನೀಡಿದ್ದರು. ಅದಾಗಿ ಕೆಲ ತಿಂಗಳ ನಂತರ ಮಧುಕರ್ ಪರ ನಿಂತುಕೊಂಡಿದ್ದರು. ಇದು ಸಹ ಸುಧೀರ್ ಅವರನ್ನು ಹೆಚ್ಚು ಕಾಡಲಾರಂಭಿಸಿತ್ತು’ ಎಂದು ತಿಳಿಸಿದರು.

‘ಶ್ರೀರಾಮ ಯುವಕರ ತಂಡ’ ಕಟ್ಟಿದ್ದ

‘ಜೆ.ಸಿ.ನಗರ ಮಾರಪ್ಪ ಬ್ಲಾಕ್‌ನ ನಿವಾಸಿಯಾದ ಆರೋಪಿ ಸೂರಜ್ ಸಿಂಗ್, ಬಿ.ಎ ಪದವೀಧರ. ಎರಡು ವರ್ಷಗಳ ಹಿಂದಷ್ಟೇ ಅಲಯನ್ಸ್ ವಿಶ್ವವಿದ್ಯಾಲಯದಲ್ಲಿ ಕೆಲಸಕ್ಕೆ ಸೇರಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಆರಂಭದಲ್ಲಿ ಸೂರಜ್‌ಗೆ ತಿಂಗಳಿಗೆ ₹ 20 ಸಾವಿರ ಸಂಬಳವಿತ್ತು. ಮಧುಕರ್ ಹಾಗೂ ಅಯ್ಯಪ್ಪ ಅವರನ್ನು ಕೊಲೆ ಮಾಡಲು ಒಪ್ಪಿಕೊಂಡ ಬಳಿಕ ಆತನ ಸಂಬಳವನ್ನು ₹ 50 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ಅದಾದ ನಂತರ, ಮಧುಕರ್ ಹಾಗೂ ಅಯ್ಯಪ್ಪ ಅವರನ್ನು ಹಿಂಬಾಲಿಸುವುದೇ ಆತನ ಕೆಲಸವಾಗಿಬಿಟ್ಟಿತ್ತು.’

‘ಶ್ರೀರಾಮ ಯುವಕರ ತಂಡ’ ಕಟ್ಟಿದ್ದ ಆತ, ಇತ್ತೀಚೆಗೆ ವಿಜಯದಶಮಿ ದಿನದಂದು ಮೆರವಣಿಗೆ ವಿಚಾರವಾಗಿ ಗಲಾಟೆ ಸಹ ಮಾಡಿಕೊಂಡಿದ್ದ. ಆತನ ಸಂಘಟನೆ ನೋಂದಣಿ ಆಗಿರಲಿಲ್ಲ’ ಎಂದು ಮೂಲಗಳು ತಿಳಿಸಿವೆ.

ನಟ ಸುದೀಪ್‌ಗೆ ಭಾವ!

‘ಕೊಲೆ ಆರೋಪಿ ಸುಧೀರ್ ಅಂಗೂರ್, ನಟ ಸುದೀಪ್ ಅವರ ಅಕ್ಕ ಸುಜಾತಾ ಅವರ ಪತಿ’ ಎಂದು ಮೂಲಗಳು ಹೇಳಿವೆ.

‘ಮದುವೆಯಾದ ಕೆಲವೇ ವರ್ಷಗಳಲ್ಲಿ ಸುಧೀರ್ ವರ್ತನೆ ಬದಲಾಗಿತ್ತು. ಪತ್ನಿಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲಾರಂಭಿಸಿದ್ದ. ಅದರಿಂದ ನೊಂದ ಪತ್ನಿ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ’ ಎಂದು ಮೂಲಗಳು ತಿಳಿಸಿವೆ.

ರಕ್ಷಣೆ ಕೋರಿದ್ದ ಅಯ್ಯಪ್ಪ, ಮಧುಕರ್

‘ವಿಶ್ವವಿದ್ಯಾಲಯ ವಿವಾದ ಶುರುವಾದ ಬಳಿಕ ಮಧುಕರ್ ಹಾಗೂ ಅಯ್ಯಪ್ಪ ಅವರನ್ನು ಕೆಲವರು ಹಿಂಬಾಲಿಸಲು ಆರಂಭಿಸಿದ್ದರು. ಅದರಿಂದ ಆತಂಕಗೊಂಡಿದ್ದ ಅವರಿಬ್ಬರೂ ರಕ್ಷಣೆ ಕೋರಿ ಪೊಲೀಸರಿಗೆ ಮನವಿ ಸಲ್ಲಿಸಿದ್ದರು’ ಎಂದು ಆಪ್ತರೊಬ್ಬರು ಹೇಳಿದರು.

‘ಆದರೆ, ಅವರ ಮನವಿಗೆ ಪೊಲೀಸರು ಸ್ಪಂದಿಸಿರಲಿಲ್ಲ. ಯಾವುದೇ ರಕ್ಷಣೆಯನ್ನೂ ಕೊಟ್ಟಿರಲಿಲ್ಲ. ಅಯ್ಯಪ್ಪ ಅವರು ಒಬ್ಬಂಟಿಯಾಗಿ ಓಡಾಡುತ್ತಿದ್ದದ್ದು ಆರೋಪಿಗಳಿಗೆ ಅನುಕೂಲ ಮಾಡಿಕೊಟ್ಟಿತು’ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.