ADVERTISEMENT

ಯಲಹಂಕ: 77 ಗರ್ಭಿಣಿಯರಿಗೆ ಸೀಮಂತ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2025, 16:24 IST
Last Updated 31 ಮಾರ್ಚ್ 2025, 16:24 IST
ಮಹಿಳಾ ಗ್ರಾಮಸಭೆ ಕಾರ್ಯಕ್ರಮದಲ್ಲಿ 77 ಗರ್ಭಿಣಿಯರಿಗೆ  ಸೀಮಂತ ಕಾರ್ಯ ನೆರವೇರಿಸಲಾಯಿತು
ಮಹಿಳಾ ಗ್ರಾಮಸಭೆ ಕಾರ್ಯಕ್ರಮದಲ್ಲಿ 77 ಗರ್ಭಿಣಿಯರಿಗೆ  ಸೀಮಂತ ಕಾರ್ಯ ನೆರವೇರಿಸಲಾಯಿತು   

ಯಲಹಂಕ: ‘ಮಹಿಳೆಯರಿಗೆ ಕುಟುಂಬ ನಿರ್ವಹಣೆ ಮಾಡುವುದರ ಜೊತೆಗೆ ರಾಜ್ಯ ಹಾಗೂ ರಾಷ್ಟ್ರವನ್ನು ಮುನ್ನಡೆಸುವ ಅಗಾಧ ಮತ್ತು ವಿಶೇಷವಾದ ಬುದ್ಧಿಶಕ್ತಿ, ಸಾಮರ್ಥ್ಯವಿದೆ. ಇದನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು’ ಎಂದು ಶಾಸಕ ಎಸ್.ಆರ್‌. ವಿಶ್ವನಾಥ್‌ ಹೇಳಿದರು.

ರಾಜಾನುಕುಂಟೆ ಗ್ರಾಮ ಪಂಚಾಯಿತಿ ಹಾಗೂ ವಿಶ್ವವಾಣಿ ಫೌಂಡೇಶನ್‌ ಸಹಯೋಗದೊಂದಿಗೆ ಆಯೋಜಿಸಿದ್ದ 2024-25ನೇ ಸಾಲಿನ ಮಹಿಳಾ ಗ್ರಾಮಸಭೆ ಹಾಗೂ ಸೀಮಂತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಭಾರತೀಯ ಇತಿಹಾಸ ಮತ್ತು ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಸ್ತ್ರೀಯರಿಗೆ ಅತ್ಯಂತ ಪೂಜ್ಯನೀಯ ಸ್ಥಾನವಿದೆ. ಅವರು ಮಾಡಿರುವ ಹಲವಾರು ಯಶಸ್ವಿ ಸಾಹಸ ಮತ್ತು ಸಾಧನೆಗಳು ನಮ್ಮ ಕಣ್ಮುಂದಿವೆ’ ಎಂದರು.

ADVERTISEMENT

ವಿಶ್ವವಾಣಿ ಫೌಂಡೇಶನ್‌ ಅಧ್ಯಕ್ಷೆ ವಾಣಿಶ್ರೀ ವಿಶ್ವನಾಥ್‌ ಮಾತನಾಡಿ, ‘ಕುಟುಂಬ ನಿರ್ವಹಣೆಯ ಜೊತೆಗೆ ಹಲವಾರು ರಂಗಗಳಲ್ಲಿ ಮಹಿಳೆಯರು ಅದ್ವಿತೀಯ ಸಾಧನೆಗಳನ್ನು ಮಾಡುತ್ತಿರುವುದು ಪ್ರಶಂಸನೀಯ. ಮಹಿಳೆಯರನ್ನು ಸ್ವಾವಲಂಬಿಗಳಾಗಿ ರೂಪಿಸುವ ನಿಟ್ಟಿನಲ್ಲಿ ಸಂಸ್ಥೆಯ ವತಿಯಿಂದ ಹಲವು ಸೇವಾಕಾರ್ಯಗಳನ್ನು ಕೈಗೊಳ್ಳಲಾಗಿದೆ’ ಎಂದರು.

ಒಟ್ಟು 77 ಗರ್ಭಿಣಿಯರಿಗೆ ಸೀಮಂತಕಾರ್ಯ ನೆರವೇರಿಸಲಾಯಿತು. ಮಹಿಳೆಯರಿಗಾಗಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹಿಳೆಯರಿಂದ ಕೋಲಾಟ, ಫ್ಯಾಷನ್‌ ಶೋ ಸೇರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಂದ ಏರ್ಪಡಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವಾನಿ ಶ್ರೀನಿವಾಸ್‌, ಉಪಾಧ್ಯಕ್ಷ ಶಿವಕುಮಾರ್‌, ಮಾಜಿ ಅಧ್ಯಕ್ಷರಾದ ಎಸ್‌.ಜಿ.ನರಸಿಂಹಮೂರ್ತಿ, ಅಂಬಿಕಾ ರಾಜೇಂದ್ರಕುಮಾರ್‌, ಪಿಡಿಒ ನಾಗರಾಜ್‌, ಸದಸ್ಯರಾದ ಕೆ.ವೀರಣ್ಣ, ಚಿಕ್ಕಣ್ಣ, ಆರ್‌.ಡಿ.ರಾಜಣ್ಣ, ಎನ್‌. ಸಂತೋಷ್‌ಕುಮಾರ್‌, ಹನುಮೇಗೌಡ, ಮಮತಾ ರಮೇಶ್‌, ಸುಜಾತಮ್ಮ, ತಾಲ್ಲೂಕು ವೈದ್ಯಾಧಿಕಾರಿ ಶೈಲಕುಮಾರ್‌ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.