ADVERTISEMENT

₹ 6,000 ಕೊಟ್ಟು ನುಸುಳಿದ್ದ ಬಾಂಗ್ಲಾ ಪ್ರಜೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 19:52 IST
Last Updated 18 ಜುಲೈ 2019, 19:52 IST

ಬೆಂಗಳೂರು: ಭಾರತದೊಳಗೆ ಅಕ್ರಮವಾಗಿ ನುಸುಳಿ, ನಕಲಿ ದಾಖಲೆಗಳನ್ನು ಬಳಸಿಕೊಂಡು ಸ್ಥಳೀಯ ಗುರುತಿನ ಚೀಟಿಗಳನ್ನು ಪಡೆದಿದ್ದ ಬಾಂಗ್ಲಾದೇಶದ ಸುರೇಶರ್ ಸಿಕ್ದಾರ್ (25) ಎಂಬಾತ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ.

ಭಾರತೀಯ ಪಾಸ್‌ಪೋರ್ಟ್‌ ಬಳಸಿ ಬೆಂಗಳೂರಿನಿಂದ ದುಬೈಗೆ ಹೊರಟಿದ್ದ ಸುರೇಶರ್‌ನನ್ನು ತಪಾಸಣೆಗೆ ಒಳಪಡಿಸಿದ್ದ ವಲಸೆ ಅಧಿಕಾರಿಗಳು, ಆತನ ದಾಖಲೆಗಳು ನಕಲಿ ಎಂಬುದನ್ನು ಪತ್ತೆಮಾಡಿದ್ದಾರೆ. ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿ, ದೂರು ನೀಡಿದ್ದಾರೆ.

‘ವಲಸೆ ಅಧಿಕಾರಿಗಳು ನೀಡಿರುವ ದೂರು ಆಧರಿಸಿ ಸುರೇಶರ್‌ ಹಾಗೂ ಆತನಿಗೆ ಪಾಸ್‌ಪೋರ್ಟ್ ಮಾಡಿಕೊಟ್ಟಿದ್ದ ಕೋಲ್ಕತ್ತದ ಲಿಟೇನ್ ಮೊಂಡಲ್ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ದೇಶದ ಗಡಿ ಕಾಯುವ ರಕ್ಷಣಾ ಪಡೆಯ ಸಿಬ್ಬಂದಿಯೊಬ್ಬರಿಗೆ ₹ 6,000 ಕೊಟ್ಟಿದ್ದ ಆರೋಪಿ, ಅವರ ಸಹಾಯದಿಂದಲೇ ಬೆಲಾಪೋಲೆ ಗಡಿ ಮೂಲಕ ಕೋಲ್ಕತ್ತ ಪ್ರವೇಶಿಸಿದ್ದ. ಅಲ್ಲಿಯೇ ಲಿಟೇನ್ ಮೊಂಡಲ್‌ನಿಗೆ ₹50,000 ಕೊಟ್ಟು ಜೋಯ್ ಸಿಕಂದರ್ ಹೆಸರಿನಲ್ಲಿ ಪಾಸ್‌ಪೋರ್ಟ್‌ ಮಾಡಿಸಿಕೊಂಡಿದ್ದ’ ಎಂದು ಮಾಹಿತಿ ನೀಡಿದರು.

₹8,000ಕ್ಕೆ ಚಾಲನಾ ಪರವಾನಗಿ: ‘2015ರಲ್ಲಿ ರೈಲಿನ ಮೂಲಕ ಬೆಂಗಳೂರಿಗೆ ಬಂದಿದ್ದ ಸುರೇಶರ್, ಮೆಜೆಸ್ಟಿಕ್‌ನ ಹೋಟೆಲೊಂದರಲ್ಲಿ ಕೆಲದಿನ ಕೆಲಸ ಮಾಡಿದ್ದ. ಆನಂತರ, ಕೆಂಗೇರಿಯ ಏರ್‌ ಕಂಡಿಷನರ್‌ ದುರಸ್ತಿ ಮಳಿಗೆಯಲ್ಲಿ ಕೆಲಸಕ್ಕೆ ಸೇರಿದ್ದ’ ಎಂದು ಪೊಲೀಸರು ಹೇಳಿದರು.

‘ಕೆಂಗೇರಿಯ ವಾಹನ ತರಬೇತಿ ಶಾಲೆಯೊಂದಕ್ಕೆ ₹ 8,000 ಕೊಟ್ಟು ಚಾಲನಾ ಪರವಾನಗಿ ಪ್ರಮಾಣ ಪತ್ರವನ್ನೂ ಪಡೆದಿದ್ದ. ಸ್ಥಳೀಯ ಗುರುತಿನ ಚೀಟಿಗಳನ್ನೂ ಮಾಡಿಸಿಕೊಂಡು ತಾನೊಬ್ಬ ಭಾರತೀಯ ಪ್ರಜೆ ಎಂದು ಹೇಳಿಕೊಂಡು ಓಡಾಡುತ್ತಿದ್ದ. ಆಗಾಗ ಬಾಂಗ್ಲಾದೇಶಕ್ಕೆ ಹೋಗಿ ಪೋಷಕರನ್ನು ಭೇಟಿಯಾಗಿ ಬರುತ್ತಿದ್ದ’

‘ಸಂಬಂಧಿಯೊಬ್ಬರ ಸಲಹೆಯಂತೆ ಕೆಲಸಕ್ಕಾಗಿ ದುಬೈಗೆ ಹೋಗಲು ಮಂಗಳವಾರ (ಜುಲೈ 16) ವಿಮಾನ ನಿಲ್ದಾಣಕ್ಕೆ ಬಂದಾಗ ವಲಸೆ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.