ರಾಜರಾಜೇಶ್ವರಿನಗರ: ‘ತ್ಯಾಗ, ಬಲಿದಾನ, ಮಾನವೀಯ ಮೌಲ್ಯ, ಸಹೋದರತ್ವ, ಶಾಂತಿಯ ಸಂಕೇತ ಮತ್ತು ಎಲ್ಲರೂ ಒಗ್ಗೂಡಿ ಜೀವನ ಸಾಗಿಸುವ ಹಬ್ಬವೇ ಬಕ್ರೀದ್’ ಎಂದು ಮೌಲಾನ ಶೇಕ್ ಜಾಹೀರ್ ಅಹಮದ್ ತಿಳಿಸಿದರು.
ಮತ್ತಿಕೆರೆಯ ಜೆ.ಪಿ.ಪಾರ್ಕ್ ಆಟದ ಮೈದಾನದಲ್ಲಿ ಬಕ್ರೀದ್ ಅಂಗವಾಗಿ ಮಸ್ಜಿದ್-ಎ-ತಾಹ ಆಯೋಜಿಸಿದ್ದ ಸಾಮೂಹಿಕ ಪ್ರಾರ್ಥನೆ ನಂತರ ಅವರು ಮಾತನಾಡಿದರು.
‘ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಂಡು ಸಂಸ್ಕಾರವಂತರಾಗಿ ರೂಪಿಸಬೇಕು ಎಂದು ಇಸ್ಲಾಂ ಧರ್ಮ ಹೇಳುತ್ತದೆ. ಮಕ್ಕಳು ಬಾಲ್ಯದಲ್ಲಿಯೇ ಪ್ರೀತಿ, ವಿಶ್ವಾಸ ವೃದ್ದಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಬೇಕಾಗಿದೆ’ ಎಂದರು.
ಮಸ್ಜಿದ್-ಎ-ತಾಹಾದ ಅಧ್ಯಕ್ಷ ಸಮೀಉಲ್ಲಾ ಖಾನ್, ‘ನಮ್ಮ ಮಸೀದಿಯಲ್ಲಿ ಕನ್ನಡ ಬಾರದವರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಗ್ರಂಥಾಲಯವನ್ನು ಸ್ಥಾಪಿಸಿದ್ದೇವೆ’ ಎಂದರು.
ಸಾಮೂಹಿಕ ಪ್ರಾರ್ಥನಾ ಸಭೆಯಲ್ಲಿ, ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತದಲ್ಲಿ ಮೃತರಾದ 11 ಮಂದಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ‘ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡವರು ಶೀಘ್ರ ಗುಣಮುಖರಾಗಲಿ’ ಎಂದು ಪ್ರಾರ್ಥಿಸಲಾಯಿತು.
ಮಸ್ಜಿದ್ ಎ ತಾಹದ ಉಪಾಧ್ಯಕ್ಷ ಅಮೀರ್, ಕಾರ್ಯದರ್ಶಿ ಶಹಜಹಾನ್, ಖಜಾಂಚಿ ಸಾಗರ್ ಸಮೀಉಲ್ಲಾ, ಬೈತುಲ್ ಮಾಲ್ ಕಮಿಟಿಯ ಅಧ್ಯಕ್ಷ ನಜೀರ್, ಕಾರ್ಯದರ್ಶಿ ಬಶೀರ್ ಉಲ್ಲಾ ಬೇ, ಕೋಶಾಧ್ಯಕ್ಷ ಫಯಾಜ್, ದಸ್ತಗಿರ್ ಷರೀಫ್, ಮಹಮ್ಮದ್ ಫಕ್ರುದ್ದೀನ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.