ADVERTISEMENT

ಬೆಂಗಳೂರು: ಬಾಲಭವನದ ಟ್ರಾಫಿಕ್‌ ಉದ್ಯಾನಕ್ಕೆ ‘ರೆಡ್ ಸಿಗ್ನಲ್‌’

ಬಾಲಭವನ: ಬಿರುಕು ಬಿಟ್ಟ ರಾಕ್‌ ಕ್ಲೈಂಬಿಂಗ್, ಪ್ರಾರಂಭವಾಗದ ವಿಜ್ಞಾನ ಉದ್ಯಾನ

ಖಲೀಲಅಹ್ಮದ ಶೇಖ
Published 9 ಡಿಸೆಂಬರ್ 2025, 23:51 IST
Last Updated 9 ಡಿಸೆಂಬರ್ 2025, 23:51 IST
<div class="paragraphs"><p>ಬಾಲಭವನದ ಆವರಣದಲ್ಲಿನ ಟ್ರಾಫಿಕ್‌ ಉದ್ಯಾನದಲ್ಲಿನ ಹಾಳಾಗಿರುವ ವಾಹನ </p></div>

ಬಾಲಭವನದ ಆವರಣದಲ್ಲಿನ ಟ್ರಾಫಿಕ್‌ ಉದ್ಯಾನದಲ್ಲಿನ ಹಾಳಾಗಿರುವ ವಾಹನ

   

ಪ್ರಜಾವಾಣಿ ಚಿತ್ರಗಳು: ಪುಷ್ಕರ್‌ ವಿ.

ಬೆಂಗಳೂರು: ಮನರಂಜನೆಯ ಮೂಲಕ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಾಲಭವನದಲ್ಲಿದ್ದ ಟ್ರಾಫಿಕ್‌ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ನಿರ್ವಹಣೆ ಇಲ್ಲದ ಕಾರಣ ಅದು ಬಳಕೆಯಾಗುತ್ತಿಲ್ಲ. ಕೃತಕ ಬಂಡೆಗಳಿರುವ ಗೋಡೆಯಲ್ಲಿ (ರಾಕ್‌ ಕ್ಲೈಂಬಿಂಗ್‌ ಮಾದರಿ) ಬಿರುಕು ಬಿಟ್ಟ ಕಾರಣ ಅದನ್ನು ಬಂದ್‌ ಮಾಡಲಾಗಿದೆ.

ADVERTISEMENT

ರಸ್ತೆ ಸುರಕ್ಷತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಮಕ್ಕಳಿಗೆ ರಸ್ತೆ ಸಂಚಾರ ನಿಯಮಗಳ ಕುರಿತು ಅರಿವು ಮೂಡಿಸಲು ಈ ಉದ್ಯಾನ ಪ್ರಾರಂಭಿಸಲಾಗಿತ್ತು. ಮಕ್ಕಳು ಇಲ್ಲಿ ಪಠ್ಯದ ಜೊತೆಗೆ ಪ್ರಾಯೋಗಿಕವಾಗಿ ವಾಹನ ಚಲಾಯಿಸುವ ಮೂಲಕ ರಸ್ತೆ ಸಂಚಾರದ ನಿಯಮಗಳ ಕುರಿತು ಮಾಹಿತಿ ಪಡೆದುಕೊಳ್ಳಬಹುದಿತ್ತು. ಹೆಲ್ಮೆಟ್‌, ಸೀಟ್‌ ಬೆಲ್ಟ್‌ ಧರಿಸುವಂತಹ ಸುರಕ್ಷತಾ ಕ್ರಮಗಳ ಬಗ್ಗೆಯೂ ಸಲಹೆ ನೀಡಲಾಗುತ್ತಿತ್ತು. 

ಒಂದೂವರೆ ಎಕರೆ ಪ್ರದೇಶದಲ್ಲಿರುವ ಈ ಉದ್ಯಾನವನ್ನು ₹5 ಲಕ್ಷ ವೆಚ್ಚದಲ್ಲಿ ನವೀಕರಿಸಿ, ಪುನರಾರಂಭಿಸಲಾಗಿತ್ತು. ಈಗ ಮತ್ತೆ ಬಂದ್‌ ಮಾಡಲಾಗಿದೆ. ಇಲ್ಲಿ ಎರಡು ಕಡೆ ಟ್ರಾಫಿಕ್‌ ಸಿಗ್ನಲ್‌ಗಳನ್ನು ಅಳವಡಿಸಲಾಗಿತ್ತು. ಬಳಕೆ ಮಾಡದ ಕಾರಣ ಹಾಳಾಗಿವೆ. ರಸ್ತೆ ತಿರುವಿನ ಚಿಹ್ನೆಗಳು, ಝೀಬ್ರಾ ಕ್ರಾಸ್ ಕೂಡ ಅಳಿಸಿ ಹೋಗಿದೆ. ಎಲ್ಲೆಂದರಲ್ಲಿ ಗಿಡ–ಗಂಟಿಗಳು ಬೆಳೆದು ನಿಂತಿವೆ. ಟ್ರಾಫಿಕ್‌ ಉದ್ಯಾನ ನವೀಕರಿಸಿದ ನಂತರ ಇದಕ್ಕಾಗಿಯೇ 10 ಎಲೆಕ್ಟ್ರಿಕ್‌ ಕಾರುಗಳು, 5 ಬೈಕ್‌ಗಳು, 5 ಸೈಕಲ್‌ಗಳನ್ನು ಖರೀದಿಸಲಾಗಿತ್ತು. ಈಗ ಅವು ಸಹ ದೂಳು ತಿನ್ನುತ್ತಿವೆ. 

ವಿಜ್ಞಾನ ಉದ್ಯಾನದ ಆವರಣದಲ್ಲಿ ಬೃಹತ್‌ ಮರವೊಂದು ಬಿದ್ದಿದ್ದು, ಅಲ್ಲಿರುವ ಆಟಿಕೆಗಳಿಗೆ ಹಾನಿಯಾಗಿದೆ. ಇದರಲ್ಲಿ 16 ವರ್ಷದೊಳಗಿನ ಮಕ್ಕಳು ಆಟದ ಜೊತೆಗೆ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದುಕೊಳ್ಳಲು ಅವಕಾಶವಿತ್ತು. ಬಿದ್ದ ಮರ ವಿಲೇವಾರಿ ಮಾಡದ ಕಾರಣ ಇದನ್ನು ತಾತ್ಕಾಲಿವಾಗಿ ಬಂದ್‌ ಮಾಡಲಾಗಿದೆ. 

‘ಬಾಲಭವನದಲ್ಲಿನ ಈ ಹೊಸ ಪ್ರಯತ್ನವು ಮಕ್ಕಳಿಗೆ ಶಿಕ್ಷಣ ಮತ್ತು ನೈತಿಕ ಜೀವನ ಶೈಲಿಯನ್ನು ಒಟ್ಟುಗೂಡಿಸುವ ಒಂದು ಹೆಜ್ಜೆ ಆಗಿತ್ತು. ಪಾಲಕರು ತಮ್ಮ ಮಕ್ಕಳನ್ನು‌ ಇಲ್ಲಿಗೆ ಕರೆತಂದು ರಸ್ತೆ ಸುರಕ್ಷತೆ, ಸಂಚಾರ ನಿಯಮಗಳ ಕುರಿತು ಪ್ರಾಯೋಗಿಕ ಅನುಭವ ನೀಡಬಹುದಿತ್ತು. ಸ್ಥಗಿತಗೊಂಡ ಟ್ರಾಫಿಕ್‌ ಉದ್ಯಾನವನ್ನು ಮತ್ತೆ ಪ್ರಾರಂಭಿಸಬೇಕು’ ಎಂದು ಜಯನಗರದ ನಿವಾಸಿ ಸ್ನೇಹಾ ಒತ್ತಾಯಿಸಿದರು. 

ಬಾಲಭವನದ ಆವರಣದಲ್ಲಿಯೇ ₹40 ಲಕ್ಷ ವೆಚ್ಚದಲ್ಲಿ 30 ಅಡಿ ಎತ್ತರದ ಹಾಗೂ 12 ಅಡಿ ಅಗಲದ ಕೃತಕ ಬಂಡೆಗಳಿರುವ ಗೋಡೆ (ರಾಕ್‌ ಕ್ಲೈಂಬಿಂಗ್‌ ಮಾದರಿ) ನಿರ್ಮಿಸಲಾಗಿತ್ತು. ಈಗ ಇದರ ಹಿಂಭಾಗದಲ್ಲಿ ಬಿರುಕು ಬಿಟ್ಟಿದೆ. ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಇದನ್ನು ಬಂದ್‌ ಮಾಡಲಾಗಿದೆ ಎಂದು ಬಾಲಭವನದ ಅಧಿಕಾರಿಗಳು ತಿಳಿಸಿದರು. 

ಬೃಹತ್‌ ಮರವೊಂದು ವಿಜ್ಞಾನ ಉದ್ಯಾನದಲ್ಲಿ ಬಿದ್ದ ಕಾರಣ ಆಟಿಕೆಗಳಿಗೆ ಹಾನಿಯಾಗಿದೆ 
  • ₹5 ಲಕ್ಷ ವೆಚ್ಚದಲ್ಲಿ ಟ್ರಾಫಿಕ್ ಉದ್ಯಾನ ನವೀಕರಣ

  • ದೂಳು ತಿನ್ನುತ್ತಿರುವ ಎಲೆಕ್ಟ್ರಿಕ್‌ ಕಾರು, ಸೈಕಲ್‌ಗಳು 

  • ₹40 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ರಾಕ್‌ ಕ್ಲೈಂಬಿಂಗ್‌ನಲ್ಲಿ ಬಿರುಕು 

‘ಬಾಲಭವನದ ಸಮಗ್ರ ಅಭಿವೃದ್ಧಿಗೆ ಆದ್ಯತೆ’

ಹೊಸದಾಗಿ ಖರೀದಿಸಿದ ಎಲೆಕ್ಟ್ರಿಕ್‌ ವಾಹನಗಳ ಗುಣಮಟ್ಟ ಸರಿಯಿಲ್ಲ. ಮಕ್ಕಳು ಆ ವಾಹನಗಳಲ್ಲಿ ಕುಳಿತು ಒಂದೆರಡು ರೌಂಡ್‌ ಸಂಚರಿಸಿದರೆ ಬ್ಯಾಟರಿ ಡೌನ್‌ ಆಗುತ್ತಿತ್ತು. ಹೀಗಾಗಿ ಸಂಚಾರದ ಬಗ್ಗೆ ಜಾಗೃತಿ ಮೂಡಿಸಲು ಸಾಧ್ಯವಾಗುತ್ತಿಲ್ಲ. ಗುಣಮಟ್ಟದ ಜೊತೆಗೆ ಸಂಚಾರದ ಬಗ್ಗೆ ಜಾಗೃತಿ ಮೂಡಿಸಲು ಸಹಾಯಕವಾಗುವ ವಾಹನಗಳನ್ನು ಖರೀದಿಸಲಾಗುವುದು. ನೂತನವಾಗಿ ವಾಲ್‌ ಕ್ಲೈಂಬಿಂಗ್‌ ರಾಕ್‌ ನಿರ್ಮಿಸಲು ಟೆಂಡರ್‌ ಕರೆಯಲಾಗಿದೆ. ವಿಜ್ಞಾನ ಉದ್ಯಾನವನ್ನು ಒಂದು ವಾರದಲ್ಲಿ ಪ್ರಾರಂಭಿಸಲಾಗುವುದು. ಬಾಲಭವನದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು’ ಎಂದು ಜವಾಹರ್ ಬಾಲಭವನ ಸೊಸೈಟಿ ಅಧ್ಯಕ್ಷ ಬಿ.ಆರ್. ನಾಯ್ಡು ‘ಪ್ರಜಾವಾಣಿ’ಗೆ ತಿಳಿಸಿದರು.  ‘ಮಕ್ಕಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಮಕ್ಕಳನ್ನು ಮೊಬೈಲ್‌ ಗೀಳಿನಿಂದ ಹೊರತರಲು ಸೃಜನಶೀಲ ಸಾಮರ್ಥ್ಯ ಹೆಚ್ಚಿಸುವ ಭೌತಿಕ ಮತ್ತು ಮಾನಸಿಕ ಕ್ರೀಡಾ ಚಟುವಟಿಕೆಗಳನ್ನು ಬಾಲಭವನದಲ್ಲಿ ಆಯೋಜಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.