ADVERTISEMENT

ಬಮೂಲ್ ಸಂಧಾನ ಯಶಸ್ವಿ: ಮುಷ್ಕರ ಅಂತ್ಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2023, 15:54 IST
Last Updated 23 ಜನವರಿ 2023, 15:54 IST
ಬಮೂಲ್ ಆಡಳಿತ ಮಂಡಳಿ ಕಚೇರಿ ಎದುರು ನಿಂತಿರುವ ಹಾಲಿನ ವಾಹನಗಳು
ಬಮೂಲ್ ಆಡಳಿತ ಮಂಡಳಿ ಕಚೇರಿ ಎದುರು ನಿಂತಿರುವ ಹಾಲಿನ ವಾಹನಗಳು   

ಬೆಂಗಳೂರು: ಬೆಂಗಳೂರು ಹಾಲು ಒಕ್ಕೂಟದ (ಬಮೂಲ್‌) ಹಾಲು ಸರಬರಾಜು ಮಾಡುವ ವಾಹನಗಳ ಮಾಲೀಕರು ಆರಂಭಿಸಿದ್ದ ಮುಷ್ಕರವನ್ನು ಸೋಮವಾರ ಕೈಬಿಟ್ಟಿದ್ದಾರೆ.

ಬಮೂಲ್ ಆಡಳಿತ ಮಂಡಳಿ ನಡೆಸಿದ ಸಂಧಾನ ಸಭೆ ಯಶಸ್ವಿಯಾಗಿದ್ದು, ಮಂಗಳವಾರದಿಂದ ಹಾಲಿನ ವಾಹನಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.

ನಂದಿನಿ ಹಾಲಿನ ಪ್ಯಾಕೇಟ್‌ಗಳನ್ನು ಸಾಗಿಸುವ 300ಕ್ಕೂ ಹೆಚ್ಚು ವಾಹನಗಳನ್ನು ಬಮೂಲ್ ಬಾಡಿಗೆಗೆ ಪಡೆದಿದ್ದು, ಕೆಲ ವಾಹನಗಳಿಗಗೆ ಟ್ರಿಪ್ ಲೆಕ್ಕದಲ್ಲಿ, ಮತ್ತೆ ಕೆಲವು ವಾಹನಗಳಿಗೆ ಕಿಲೋ ಮೀಟರ್ ಲೆಕ್ಕದಲ್ಲಿ ದರ ನಿಗದಿ ಮಾಡಿದೆ. ಹೊಸ ಟೆಂಡರ್‌ನಲ್ಲಿ 15 ವರ್ಷಕ್ಕೂ ಹಳೆಯ ವಾಹನಗಳಿಗೆ ಅವಕಾಶ ನೀಡುವುದಿಲ್ಲ ಎಂಬ ಷರತ್ತು ವಿಧಿಸಿತ್ತು. ಇದಕ್ಕೆ ಮಾಲೀಕರ ವಿರೋಧ ವ್ಯಕ್ತವಾಗಿತ್ತು. ಅಲ್ಲದೇ ವಾಹನ ಮಾಲೀಕರು ಮತ್ತು ಚಾಲಕರೊಂದಿಗೆ ಬಮೂಲ್ ಅಧಿಕಾರಿಗಳು ಸೌಜನ್ಯದಿಂದ ವರ್ತಿಸದೆ ದರ್ಪ ತೋರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು.

ADVERTISEMENT

ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಅವರ ನೇತೃತ್ವದಲ್ಲಿ ಸೋಮವಾರ ಬಮೂಲ್ ಆಡಳಿತ ಮಂಡಳಿ ಮತ್ತು ವಾಹನ ಮಾಲೀಕರ ಪ್ರತಿನಿಧಿಗಳು ಸಭೆ ನಡೆಯಿತು. ‘ವಾಹನ ಮಾಲೀಕರ ಮನವೊಲಿಸಲಾಗಿದ್ದು, ಮಂಗಳವಾರದಿಂದ ಎಲ್ಲಾ ವಾಹನಗಳು ರಸ್ತೆಗೆ ಇಳಿಯಲಿವೆ’ ಎಂದು ನರಸಿಂಹಮೂರ್ತಿ ತಿಳಿಸಿದರು.

’ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ತನಕ ಬಾಡಿಗೆ ಮೊತ್ತ ಕೊಂಚ ಹೆಚ್ಚಿಸುವ ಬೇಡಿಕೆಗೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿತು. 15 ವರ್ಷ ಮೀರದ ವಾಹನಗಳನ್ನೇ ಒದಗಿಸಲು ನಾವು ಒಪ್ಪಿದ್ದೇವೆ. ಅಧಿಕಾರಿಗಳು ದರ್ಪದಿಂದ ವರ್ತಿಸದಂತೆ ನೋಡಿಕೊಳ್ಳುವುದಾಗಿ ಮಂಡಳಿ ಭರವಸೆ ನೀಡಿದೆ. ಆದ್ದರಿಂದ ಮುಷ್ಕರ ಕೈಬಿಡಲಾಗಿದೆ‘ ಎಂದು ವಾಹನ ಮಾಲೀಕರ ಸಂಘದ ಗೋವಿಂದಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.