ADVERTISEMENT

ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಬೈಕ್‌, ಟ್ರ್ಯಾಕ್ಟರ್,ಆಟೊಗಳಿಗೆ ನಿಷೇಧ

NHAI ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧ ಹೇರಿದೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 4:15 IST
Last Updated 25 ಜುಲೈ 2023, 4:15 IST
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್
ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್   

ರಾಮನಗರ: ಬೆಂಗಳೂರು– ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ (ರಾಷ್ಟ್ರೀಯ ಹೆದ್ದಾರಿ–75) ದ್ವಿಚಕ್ರ ವಾಹನ, ಆಟೊ, ಟ್ರ್ಯಾಕ್ಟರ್, ಕೃಷಿ ವಾಹನಗಳು ಸೇರಿದಂತೆ ವಿವಿಧ ಬಗೆಯ ವಾಹನಗಳ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿಷೇಧ ಹೇರಿದೆ.

ಮೋಟಾರು ವಾಹನ ಕಾಯ್ದೆಯ ಅನ್ವಯ ಪ್ರಾಧಿಕಾರವು ಜುಲೈ 12ರಂದು ಈ ಕುರಿತು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಹೊಸ ಆದೇಶವು ಆಗಸ್ಟ್ 1ರಿಂದ ಜಾರಿಗೆ ಬರಲಿದೆ.

ಸಂಚಾರಕ್ಕೆ ಎಕ್ಸ್‌ಪ್ರೆಸ್‌ ವೇ ಮುಕ್ತವಾದಾಗಲೇ ಬೈಕ್, ಆಟೊ ಹಾಗೂ ಕೃಷಿಗೆ ಬಳಸುವ ವಾಹನಗಳ ಸಂಚಾರವನ್ನು ನಿಷೇಧಿಸಬೇಕು ಎಂಬು ಮಾತು ಕೇಳಿ ಬಂದಿತ್ತು. ಈ ಕುರಿತು, ಪ್ರಾಧಿಕಾರ ಪ್ರಸ್ತಾವ ಸಿದ್ದಪಡಿಸಿ ಕೇಂದ್ರ ಭೂ ಸಾರಿಗೆ ಸಚಿವಾಲಯಕ್ಕೆ ಕಳಿಸಿ ಕೊಟ್ಟಿತ್ತು. ಆಗ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. ನಂತರ ವಿಷಯ ತಣ್ಣಗಾಗಿತ್ತು.

ADVERTISEMENT

ಎಕ್ಸ್‌ಪ್ರೆಸ್‌ ವೇನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳವಾದ ಬೆನ್ನಲ್ಲೇ, ಪ್ರಸ್ತಾವದ ಕುರಿತ ಚರ್ಚೆ ಮುನ್ನೆಲೆಗೆ ಬಂದಿತ್ತು. ಉನ್ನತ ಮಟ್ಟದ ಅಧಿಕಾರಿಗಳ ಹಂತದಲ್ಲಿ ಪರಿಶೀಲನೆ ನಡೆದಿತ್ತು. ಕಡೆಗೂ ಅಧಿಕಾರಿಗಳು ಪ್ರಸ್ತಾವಕ್ಕೆ ಹಸಿರು ನಿಶಾನೆ ತೋರಿದ್ದು, ಗೆಜೆಟ್ ಅಧಿಸೂಚನೆಯೂ ಆಗಿದೆ. ಇತ್ತೀಚೆಗಷ್ಟೇ ಪ್ರಾಧಿಕಾರದ ತಜ್ಞರ ಸಮಿತಿ ಎಕ್ಸ್‌ಪ್ರೆಸ್‌ ವೇಗೆ ಭೇಟಿ ನೀಡಿ, ಸುರಕ್ಷತೆ ಮತ್ತು ಅಪಘಾತ ತಡೆ ಕ್ರಮಗಳ ಕುರಿತು ಪರಿಶೀಲನೆ ನಡೆಸಿತ್ತು.

ಯಾವುದಕ್ಕೆಲ್ಲಾ ನಿಷೇಧ

– ಮೋಟಾರ್ ಸೈಕಲ್‌ಗಳು (ಸ್ಕೂಟರ್‌ ಹಾಗೂ ಇತರ ದ್ವಿಚಕ್ರ ವಾಹನ)

– ಮೂರು ಚಕ್ರದ ವಾಹನಗಳು (ಇ– ಗಾಡಿ, ಇ–ರಿಕ್ಷಾ)

– ಮೋಟಾರ್ ರಹಿತ ವಾಹನಗಳು

– ಟ್ರೇಲರ್‌ಗಳ ಸಹಿತ ಅಥವಾ ರಹಿತವಾದ ವಿಶೇಷ ಟ್ರಾಕ್ಟರ್‌ಗಳು

– ಮಲ್ಟಿ ಆಕ್ಸೆಲ್ ಹೈಡ್ರಾಲಿಕ್ ಟ್ರೈಲರ್ ವಾಹನಗಳು

– ಕ್ವಾಡ್ರಿ ಸೈಕಲ್‌ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.