ADVERTISEMENT

ಯಲಹಂಕ ವಾಯುನೆಲೆ ಸುತ್ತಮುತ್ತಲಿನ 13 ಕಿ.ಮೀ ಮಾಂಸ ಮಾರಾಟ ನಿಷೇಧ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 15:39 IST
Last Updated 18 ಜನವರಿ 2025, 15:39 IST
   

ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆಯುವ ಸಂದರ್ಭದಲ್ಲಿ ಯಲಹಂಕ ವಾಯುನೆಲೆ ಸುತ್ತಮುತ್ತಲಿನ 13 ಕಿ.ಮೀ ವ್ಯಾಪ್ತಿಯಲ್ಲಿ ಮಾಂಸ ಮಾರಾಟ, ಮಾಂಸಾಹಾರ ತಯಾರಿಕೆಯನ್ನು ಬಿಬಿಎಂಪಿ ನಿಷೇಧಿಸಿದೆ.

23ನೇ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಫೆಬ್ರುವರಿ 10ರಿಂದ 14ರವರೆಗೆ ನಡೆಯಲಿದ್ದು, ಜನವರಿ 23ರಿಂದ ಫೆಬ್ರುವರಿ 17ರವರೆಗೆ ಯಲಹಂಕ ವಾಯುನೆಲೆ ಸುತ್ತಮುತ್ತ ಮಾಂಸ ಮಾರಾಟ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ಮೊಹ್ಮದ್‌ ನಯೀಮ್‌ ಮೊಮಿನ್‌ ತಿಳಿಸಿದ್ದಾರೆ.

ಯಲಹಂಕ ವಲಯದ ಏರ್‌ಫೋರ್ಸ್‌ ಸ್ಟೇಷನ್‌ನಿಂದ 13 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚಬೇಕು. ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಾಹಾರ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸಿದರೆ, ಬಿಬಿಎಂಪಿ ಕಾಯ್ದೆ 2020 ಮತ್ತು ಏರ್‌ಕ್ರಾಫ್ಟ್ ರೂಲ್ಸ್ 1937 ರ ರೂಲ್ 91ರಂತೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ADVERTISEMENT

ಕ್ರೇನ್‌ ಸ್ಥಗಿತ:

ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ಯಲಹಂಕ ವಾಯುನೆಲೆಯ ಸುತ್ತಮುತ್ತ ನಿರ್ಮಾಣ ಹಂತದ ಕಟ್ಟಡ ಮೇಲಿರುವ ಕ್ರೇನ್‌ಗಳ ಎತ್ತರವನ್ನು ತಗ್ಗಿಸುವಂತೆ ಬಿಬಿಎಂಪಿ ಸೂಚಿಸಿದೆ.

ಯಲಹಂಕ ವಾಯುನೆಲೆಯಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್‌ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ಗಳನ್ನು ಫೆಬ್ರುವರಿ 1ರಿಂದ 14ರವರೆಗೆ ತಗ್ಗಿಸಲು ಮತ್ತು ಕ್ರೇನ್‌ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಬಿಎಂಪಿ ನಗರ ಯೋಜನೆ– ಉತ್ತರ ವಿಭಾಗದ ಜಂಟಿ ನಿರ್ದೇಶಕ ವಿ. ರಾಕೇಶ್‌ ಕುಮಾರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.