ADVERTISEMENT

ಸಂಚಾರ ಕಾನ್‌ಸ್ಟೆಬಲ್‌ ಮುಖ, ಎದೆಗೆ ಗುದ್ದಿ ಹಲ್ಲೆ

ವ್ಹೀಲ್‌ ಕ್ಲ್ಯಾಂಪ್ ಹಾಕಿದ್ದಕ್ಕೆ ಆಕ್ರೋಶ * ‘ಪೊಲೀಸರಿಗೆ ಒಂದು ಗತಿ ಕಾಣಿಸಿ’ ಎಂದಿದ್ದ ಮಹಿಳೆಯರು

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 21:14 IST
Last Updated 21 ಜುಲೈ 2023, 21:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ‘ನಿಲುಗಡೆ ನಿಷೇಧ’ ಸ್ಥಳದಲ್ಲಿ ನಿಲ್ಲಿಸಿದ್ದ ಕಾರಿಗೆ ವ್ಹೀಲ್‌ ಕ್ಲ್ಯಾಂಪ್‌ ಹಾಕಿದ್ದಕ್ಕೆ ಸಂಚಾರ ಪೊಲೀಸರ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆಯೊಡ್ಡಿದ್ದ ಆರೋಪದಡಿ ಇಬ್ಬರು ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಗಳಾದ ಸುಲೇಮಾನ್ ಹಾಗೂ ಫಹಾದ್ ಬಂಧಿತರು. ಬಾಣಸವಾಡಿ ಸಂಚಾರ ಠಾಣೆ ಕಾನ್‌ಸ್ಟೆಬಲ್ ಉಮೇಶ್ ನೀಡಿದ್ದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಉಮೇಶ್ ಹಾಗೂ ಎಎಸ್‌ಐ ನಾರಾಯಣಸ್ವಾಮಿ ಅವರು ಜುಲೈ 19ರಂದು ಬೆಳಿಗ್ಗೆ ಕರ್ತವ್ಯದಲ್ಲಿದ್ದರು. ಎಚ್‌ಬಿಆರ್ ಬಡಾವಣೆಯ 5ನೇ ಮುಖ್ಯರಸ್ತೆಯಲ್ಲಿರುವ ಎಸ್‌ಬಿಐ ಎಟಿಎಂ ಮುಂಭಾಗದಲ್ಲಿರುವ ನಿಲುಗಡೆ ನಿಷೇಧ ಸ್ಥಳದಲ್ಲಿ ಕಾರು (ಕೆಎ 04 ಎಂ.ಎಲ್–7075) ನಿಲ್ಲಿಸಲಾಗಿತ್ತು. ಇದನ್ನು ನೋಡಿದ್ದ ಉಮೇಶ್, ಕಾರಿಗೆ ವ್ಹೀಲ್ ಕ್ಲ್ಯಾಂಪ್ ಹಾಕಿ ಹೋಗಿದ್ದರು.’

ADVERTISEMENT

‘ಕೆಲ ನಿಮಿಷಗಳ ನಂತರ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಕಾರಿಗೆ ಹಾಕಿದ್ದ ವ್ಹೀಲ್ ಕ್ಲ್ಯಾಂಪ್‌ ಗಮನಿಸಿದ್ದರು. ಪೊಲೀಸರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಉಮೇಶ್ ಹಾಗೂ ನಾರಾಯಣಸ್ವಾಮಿ, ವ್ಹೀಲ್ ಕ್ಲ್ಯಾಂಪ್‌ ತೆರೆಯುತ್ತಿದ್ದರು. ಅದೇ ಸಂದರ್ಭದಲ್ಲಿ ಆರೋಪಿಗಳು ಹಾಗೂ ಇಬ್ಬರು ಮಹಿಳೆಯರು, ಸಿಬ್ಬಂದಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ‘ಪೊಲೀಸರಿಗೆ ಒಂದು ಗತಿ ಕಾಣಿಸಿ’ ಎಂದು ಮಹಿಳೆಯರು ಕೂಗಾಡಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಆರೋಪಿಗಳು, ಮುಖ, ತಲೆ ಹಾಗೂ ಎದೆಗೆ ಹೊಡೆದಿದ್ದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಹಲ್ಲೆಯಿಂದ ಗಾಯಗೊಂಡಿದ್ದ ಸಿಬ್ಬಂದಿ, ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿ ಠಾಣೆಗೆ ದೂರು ನೀಡಿದ್ದಾರೆ’ ಎಂದು ಹೇಳಿವೆ.

ಆಸ್ಪತ್ರೆಗೆ ಮಹಿಳೆ ಕರೆತಂದಿದ್ದ ಆರೋಪಿಗಳು: ‘ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದ ಮಹಿಳೆಯೊಬ್ಬರನ್ನು ಆರೋಪಿಗಳು, ಕಾರಿನಲ್ಲಿ ಆಸ್ಪತ್ರೆಗೆ ಕರೆತಂದಿದ್ದರು. ಇದೇ ಸಂದರ್ಭದಲ್ಲಿ, ನಿಲುಗಡೆ ನಿಷೇಧ ಸ್ಥಳದಲ್ಲಿ ಕಾರು ನಿಲ್ಲಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.