
ಬಂಧನ (ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದ ಪತಿಯನ್ನು ಜೀವನ್‌ಬಿಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಷೇಕ್ ಮುಜೀಬ್(35) ಬಂಧಿತ ಆರೋಪಿ. ಆರ್.ಟಿ.ನಗರದ ನಿಗರ್(28) ಹಲ್ಲೆಗೆ ಒಳಗಾದವರು. ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಮುರಗೇಶಪಾಳ್ಯದ ವಿಂಡ್ ಟನಲ್ ರಸ್ತೆಯ ಒಮೆಗಾ ಹೆಲ್ತ್ ಕೇರ್ ಹಿಂಭಾಗ ಈ ಘಟನೆ ನಡೆದಿದೆ.
‘ಆರೋಪಿ ಷೇಕ್ ಮುಜೀಬ್ ಮತ್ತು ನಿಗರ್ ದಂಪತಿ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಆರ್.ಟಿ.ನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಷೇಕ್ ಮುಜೀಬ್ ಚಾಲಕ ವೃತ್ತಿ ಮಾಡುತ್ತಿದ್ದರು. ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ನಡೆಯತ್ತಿತ್ತು. ಪತ್ನಿ ನಿಗರ್ ಪತಿಯಿಂದ ಪ್ರತ್ಯೇಕಗೊಂಡು ಆರು ತಿಂಗಳಿಂದ ಪಿಜಿಯಲ್ಲಿ ನೆಲೆಸಿದ್ದರು. ಊಬರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ನಿಗರ್ ವಾಸ್ತವ್ಯ ಮಾಡಿದ್ದ ಪಿಜಿ ಬಳಿಗೆ ಸೋಮವಾರ ರಾತ್ರಿ ಬಂದಿದ್ದ ಆರೋಪಿ, ಹೊರಗೆ ಕಾದು ಕುಳಿತಿದ್ದ. ಸಂಜೆ 7 ಗಂಟೆ ಸುಮಾರಿಗೆ ಪತ್ನಿ ನಿಗರ್ ಬಂದಾಗ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ನಿಗರ್ ಅವರನ್ನು ಸ್ಥಳೀಯರೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಕೊಲೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.