ADVERTISEMENT

ಬೆಂಗಳೂರು | ಆಟೊ ಚಾಲಕರ ಕಿರಿಕಿರಿ: ಪ್ರಯಾಣಿಕರು ಹೈರಾಣ

ಹೆಚ್ಚಿನ ಬಾಡಿಗೆ, ಸುಲಿಗೆ-ಆಟೊ ಚಾಲಕರ ವಿರುದ್ಧ ಪ್ರಕರಣ

ಕೆ.ಎಸ್.ಸುನಿಲ್
Published 4 ಏಪ್ರಿಲ್ 2025, 1:13 IST
Last Updated 4 ಏಪ್ರಿಲ್ 2025, 1:13 IST
ಆಟೊ
ಆಟೊ   

ಬೆಂಗಳೂರು: ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗದಿರುವುದು ಹಾಗೂ ನಿಗದಿಗಿಂತ ಹೆಚ್ಚಿನ ಬಾಡಿಗೆ ಕೇಳುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಆಟೊ ಚಾಲಕರ ವಿರುದ್ಧ ಆರು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

2024ರಲ್ಲಿ ಆಟೊ ಚಾಲಕರ ವಿರುದ್ಧ ವಿವಿಧ ಸಂಚಾರ ಠಾಣೆಗಳಲ್ಲಿ 6,274 ಪ್ರಕರಣಗಳು ದಾಖಲಾಗಿದ್ದು, ₹32.94 ಲಕ್ಷ ದಂಡ ವಸೂಲು ಮಾಡಲಾಗಿದೆ.

2022ರಲ್ಲಿ4,362 ಪ್ರಕರಣ ದಾಖಲಾಗಿದ್ದು, ₹20.96 ಲಕ್ಷ ದಂಡ ವಸೂಲು ಮಾಡಲಾಗಿತ್ತು. 2023ರಲ್ಲಿ 3,136 ಪ್ರಕರಣ ದಾಖಲಾಗಿ, ₹14.65 ಲಕ್ಷ ದಂಡ ವಸೂಲು ಮಾಡಲಾಗಿದೆ. ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.

ಪ್ರಯಾಣಿಕರ ಮೇಲೆ ಆಟೊ ಚಾಲಕರ ದೌರ್ಜನ್ಯ ಹಾಗೂ ಕಿರಿಕಿರಿ ಆರೋಪದ ಮೇರೆಗೆ ನಗರದ ಸಂಚಾರ ಪೊಲೀಸರು, ಚಾಲಕರ ವಿರುದ್ಧ ಕಾರ್ಯಾಚರಣೆ ನಡೆಸಿ, ನಿಯಮ ಉಲ್ಲಂಘಿಸಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ADVERTISEMENT

‘ಮೀಟರ್ ಮೇಲೆ ₹50–100 ಕೊಡಿ’, ‘ಮೀಟರ್‌ ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಕೊಡಿ’, ‘ಚಿಕ್ಕಜಾಲ, ಜಾಲಹಳ್ಳಿ ಕ್ರಾಸ್‌ಗೆ ಬರೋಲ್ಲಾ ರೀ..’ ಈ ರೀತಿ ಹೇಳಿ ನಿಯಮ ಉಲ್ಲಂಘನೆ ಮಾಡುತ್ತಿದ್ದ ಆಟೊ ಚಾಲಕರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ

‘ನಿಗದಿಗಿಂತ ಹೆಚ್ಚಿನ ಬಾಡಿಗೆ ಕೇಳುವುದು, ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗದಿರುವುದು, ಪ್ರಯಾಣಿಕರಿಂದ ಮೊಬೈಲ್‌, ನಗದು ಸುಲಿಗೆ ನಡೆಸುತ್ತಿರುವಂತಹ ಪ್ರಕರಣಗಳು ದಾಖಲಾಗುತ್ತಿವೆ. ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ತಮಗಾದ ಕಹಿ ಅನುಭವಗಳನ್ನು ಹಂಚಿಕೊಂಡು, ಪೊಲೀಸರ ಗಮನಕ್ಕೆ ತಂದಿದ್ದಾರೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

ಹೆಚ್ಚಿನ ದರ ನೀಡಲು ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಆಟೊ ಚಾಲಕ ಬೆದರಿಕೆ ಹಾಕಿರುವ ಘಟನೆಯನ್ನು ಜಾಲತಾಣದಲ್ಲಿ ಉಲ್ಲೇಖಿಸಿದ್ದರು.

‘ಮೆಟ್ರೊ ರೈಲಿನ ಸೌಲಭ್ಯವಿಲ್ಲದ ಕಡೆಗಳಲ್ಲಿ ಬಸ್ ಹಾಗೂ ಆಟೊದಲ್ಲಿ ತೆರಳುವುದು ಪ್ರಯಾಣಿಕರಿಗೆ ಅನಿವಾರ್ಯ. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಚಾಲಕರು ದುಬಾರಿ ದರ ವಸೂಲಿ ಮಾಡಿದ್ದಾರೆ. ದೂರದ ಊರುಗಳಿಂದ ಬರುವ ಪ್ರಯಾಣಿಕರಿಗೆ ನೆಪ ಹೇಳಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರು’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ತಾವು ಕೇಳಿದಷ್ಟು ಹಣ ನೀಡಿಲ್ಲ ಎಂಬ ಕಾರಣಕ್ಕೆ ಕೆಲವು ಸ್ಥಳಗಳಲ್ಲಿ ಬಾಡಿಗೆಗೆ ಬರಲು ಆಟೊ ಚಾಲಕರು ಹಿಂದೇಟು ಹಾಕುತ್ತಿದ್ದರು. ಅಂತಹ ಆಟೊಗಳನ್ನು ಪತ್ತೆ ಮಾಡಿ ಚಾಲಕರಿಗೆ ಎಚ್ಚರಿಕೆ ನೀಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಮೆಜೆಸ್ಟಿಕ್‌ಗೆ ಮಧ್ಯರಾತ್ರಿ ಬರುವ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ದರ ಪಡೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಸಂಚಾರ ಪೊಲೀಸರು ಅಳವಡಿಸಿರುವ ಸೂಚನಾ ಫಲಕ
ಪ್ರಯಾಣಿಕರು ಕರೆದ ಸ್ಥಳಕ್ಕೆ ಹೋಗದಿರುವುದು ನಿಗದಿಗಿಂತ ಹೆಚ್ಚಿನ ಬಾಡಿಗೆ ಕೇಳುವ ಆಟೊ ಚಾಲಕರ ವಿರುದ್ಧ ಪೊಲೀಸರಿಗೆ ದೂರು ನೀಡಬಹುದು.
ಎಂ.ಎನ್.ಅನುಚೇತ್ ಸಂಚಾರಿ ವಿಭಾಗದ ಜಂಟಿ ಪೊಲೀಸ್ ಕಮಿಷನರ್

‘ಮೀಟರ್ ದರ ಮಾತ್ರ ನೀಡಬೇಕು’

‘ಆಟೊ ಚಾಲಕರು ಹೆಚ್ಚಿನ ದರಕ್ಕೆ ಬೇಡಿಕೆ ಇರಿಸಿದರೆ ಪ್ರಯಾಣಿಕರು ನೀಡಬಾರದು. ಚಾಲಕರು ಸಹ ಮೀಟರ್‌ ದರ ಮಾತ್ರ ಪಡೆಯಬೇಕು. ಕೆಲವೊಬ್ಬರು ₹50ರಿಂದ ₹500ರವರೆಗೂ ಕೇಳುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಪ್ರಯಾಣಿಕರು ನೀಡಬಾರದು. ನಗರದ ಹೊರ ವಲಯಕ್ಕೆ ತೆರಳಿದ ಸಂದರ್ಭದಲ್ಲಿ ಹೆಚ್ಚುವರಿ ₹20 ಹಣ ಕೇಳುವುದು ತಪ್ಪಲ್ಲ. ವಾಪಸ್ ಬರುವಾಗ ಬಾಡಿಗೆ ಇರುವುದಿಲ್ಲ’ ಎಂದು ಬೆಂಗಳೂರು ಸಾರಥಿ ಸೇನೆ (ಆಟೊ ಚಾಲಕರ ಸಂಘಟನೆ) ಅಧ್ಯಕ್ಷ ಬಿ.ರಾಮೇಗೌಡ ತಿಳಿಸಿದರು. ‘ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಚಾಲಕರ ಕರ್ತವ್ಯ. ಪ್ರಯಾಣಿಕರನ್ನು ಸುಲಿಗೆ ಮಾಡುವುದು ಸರಿಯಲ್ಲ. ಸಂಚಾರ ಪೊಲೀಸರು ಪ್ರಯಾಣಿಕರ ಜತೆ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ತರಬೇತಿ ನೀಡಿದ್ದಾರೆ’ ಎಂದು ಹೇಳಿದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.