ADVERTISEMENT

ಬೆಂಗಳೂರು ನಗರ: ಒಂದೇ ದಿನ 596 ಮಂದಿಗೆ ಕೊರೊನಾ ಸೋಂಕು

ಬೆಂಗಳೂರಿನಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 84ಕ್ಕೆ ಏರಿಕೆ l ಒಂದು ವಾರದಲ್ಲಿ 1,455 ಪ್ರಕರಣ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 19:24 IST
Last Updated 27 ಜೂನ್ 2020, 19:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೋವಿಡ್ ಸಮುದಾಯಕ್ಕೆ ಹರಡಿದೆಯೋ ಇಲ್ಲವೊ ಎಂಬ ಚರ್ಚೆ ನಡೆಯುತ್ತಿರುವ ನಡುವೆಯೇ ಇದಕ್ಕೆ ಪುರಾವೆ ಎಂಬಂತೆ ಶನಿವಾರ ಒಂದೇ ದಿನ 596 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದಾಗಿ ನಗರದಲ್ಲಿ ಸೋಂಕಿತರ ಸಂಖ್ಯೆ 2,531ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕು ತಗುಲಿದ್ದ ಮೂವರು ಮೃತಪಟ್ಟಿದ್ದು, ಈ ಕಾಯಿಲೆಯಿಂದ ಸಾವಿಗೀಡಾದವರ ಸಂಖ್ಯೆ 84ಕ್ಕೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣಗಳ ಸಂಖ್ಯೆ 1,913ಕ್ಕೆ ತಲುಪಿದ ಪರಿಣಾಮ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಕೊರತೆ ಉಲ್ಬಣಿಸಿದೆ. ಹೆಚ್ಚುವರಿ ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಬಿಬಿಎಂಪಿ ಹೇಳಿತ್ತಾದರೂ, ಕೆಲ ರೋಗಿಗಳು ಆಸ್ಪತ್ರೆಗೆ ದಾಖಲಾಗಲು ದಿನವಿಡೀ ಕಾಯಬೇಕಾದ ಪರಿಸ್ಥಿತಿ ಶನಿವಾರವೂ ಕಂಡುಬಂತು. ರೋಗಿಗಳನ್ನು ಯಾವ ಆಸ್ಪತ್ರೆಗೆ ಕಳುಹಿಸಿಕೊಡಬೇಕು ಎಂಬ ಗೊಂದಲಅಧಿಕಾರಿಗಳನ್ನೂ ಕಾಡುತ್ತಿದೆ. ಖಾಸಗಿ ಆಸ್ಪತ್ರೆಗಳು ಚಿಕಿತ್ಸೆಗೆ ಸಜ್ಜಾಗದ ಪರಿಣಾಮ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ದಟ್ಟಣೆ ಹೆಚ್ಚುತ್ತಿದೆ.

ADVERTISEMENT

ನಗರದಲ್ಲಿ ಕೇವಲ ಒಂದು ವಾರದಲ್ಲಿ 1,455 ಪ್ರಕರಣಗಳು ವರದಿಯಾಗಿವೆ. ಈ ಅವಧಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ ಬಹುತೇಕರು ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲುತ್ತಿದ್ದವರಾಗಿದ್ದಾರೆ. ಹಲವರಿಗೆ ಹೇಗೆ ಸೋಂಕು ತಗುಲಿತು ಎನ್ನುವುದೇ ಪತ್ತೆಯಾಗಿಲ್ಲ. ಅಂತಹವರ ಜೊತೆ ನೇರ ಸಂಪರ್ಕ ಹೊಂದಿದವರನ್ನು ಪತ್ತೆ ಮಾಡುವುದು ಕೂಡ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.

ಡೀನ್ ಸಾವು: ನಗರದ ಕಾಲೇಜು ಒಂದರ 50 ವರ್ಷದ ಡೀನ್ ಒಬ್ಬರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಅವರು ಕೆಲ ದಿನಗಳ ಹಿಂದೆ ನ್ಯೂಯಾರ್ಕ್‌ನಿಂದ ಮರಳಿದ್ದರು. ಈ ಪ್ರಕರಣ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ಉಲ್ಲೇಖವಾಗಿಲ್ಲ. ಆದರೆ, ಬಿಬಿಎಂಪಿ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ವಿಜಯನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಶ್ರೂಷಕಿ ಕೊರೊನಾ ಸೋಂಕಿತರಾಗಿದ್ದಾರೆ. ಜಗಜೀವನರಾಮ್‌ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಫಿವರ್ ಕ್ಲಿನಿಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಔಷಧಿ ವಿತರಕ ಹಾಗೂ ಮಹಿಳಾ ಸಹಾಯಕಿ ಕೋವಿಡ್ ಪೀಡಿತರಾಗಿದ್ದಾರೆ.

ಐಸಿಯುನಲ್ಲಿ 125 ರೋಗಿಗಳು

ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದಂತೆ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆ ಕೂಡ ಅಧಿಕವಾಗಿದೆ. ಸದ್ಯ ವಿವಿಧ ಆಸ್ಪತ್ರೆಗಳ ಐಸಿಯುವಿನಲ್ಲಿ 125 ರೋಗಿಗಳು ಚಿಕಿತ್ಸೆ
ಪಡೆದುಕೊಳ್ಳುತ್ತಿದ್ದಾರೆ.

‘ಇನ್ನಾದರೂ ಜನತೆ ಎಚ್ಚೆತ್ತುಕೊಂಡು ಮುಂಜಾಗ್ರತೆ ಕ್ರಮಗಳನ್ನು ಅನುಸರಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಅಂತರವನ್ನು ಕಾಯ್ದುಕೊಳ್ಳಬೇಕು. ಲಾಕ್‌ ಡೌನ್ ಸಡಿಲಿಸಿದ ಬಳಿಕ ಗುಂಪು ಗುಂಪಾಗಿ ಸೇರಿದ ಪರಿಣಾಮ ಸೋಂಕು ಹಲವರಿಗೆ ಹರಡಿದೆ. ಎಲ್ಲೆಂದರೆಲ್ಲಿ ಉಗುಳುವುದು, ಧೂಮಪಾನ ಮಾಡುವ ಕೆಟ್ಟ ಅಭ್ಯಾಸವನ್ನು ಬಿಡಬೇಕು. ಬಹುತೇಕ ಯುವಕರಲ್ಲಿಕೊರೊನಾ ಸೋಂಕು ತಮಗೆ ಏನು ಮಾಡದು ಎಂಬ ಭ್ರಮೆಯಿದೆ. ಅವರಿಂದ ಕುಟುಂಬದ ಹಿರಿಯರು ಕೂಡ ಸೋಂಕಿತರಾಗಿ ಸಮಸ್ಯೆ ಎದುರಿಸಬೇಕಾಗುತ್ತದೆ ಎನ್ನುವುದನ್ನು ಅವರು ಮರೆಯಬಾರದು‌’ ಎಂದು ಬೆಂಗಳೂರು ನಗರ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಎಚ್ಚರಿಸಿದರು.

ಕ್ವಾರಂಟೈನ್‌: ನಿಯಮ ಪರಿಷ್ಕರಣೆ

ಇತರ ರಾಜ್ಯಗಳಿಂದ ಬರುವವರ ಕ್ವಾರಂಟೈನ್‌ ನಿಯಮದಲ್ಲಿ ಸ್ವಲ್ಪ ಪರಿಷ್ಕರಣೆ ಮಾಡಿರುವ ಕಂದಾಯ ಇಲಾಖೆ, ಮಹಾರಾಷ್ಟ್ರದಿಂದ ಬಂದವರು 7 ದಿನ ಸಾಂಸ್ಥಿಕ ಕ್ವಾರಂಟೈನ್ ಮತ್ತು 7 ದಿನಗಳ ಮನೆ ಕ್ವಾರಂಟೈನ್‌ ಅನ್ನು ಕಡ್ಡಾಯವಾಗಿ ಪೂರೈಸಬೇಕು ಎಂದು ತಿಳಿಸಿದೆ.

ಮಹಾರಾಷ್ಟ್ರ ಹೊರತು ಇತರ ರಾಜ್ಯಗಳಿಂದ ಬಂದವರು 14 ದಿನಗಳ ಮನೆ ಕ್ವಾರಂಟೈನಲ್ಲಿರಬೇಕು ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌ ಸೂಚಿಸಿದ್ದಾರೆ.

ಅಂಕಿ–ಅಂಶಗಳು

2,531

ನಗರದಲ್ಲಿ ವರದಿಯಾದ ಒಟ್ಟು ಪ್ರಕರಣಗಳು

533

ಗುಣಮುಖರಾಗಿ ಮನೆಗೆ ತೆರಳಿದವರು

1,913

ಚಿಕಿತ್ಸೆ ಪಡೆದುಕೊಳ್ಳುತ್ತಿರುವ ರೋಗಿಗಳು

ಒಂದು ವಾರದಲ್ಲಿ ವರದಿಯಾದ ಪ್ರಕರಣಗಳು

ದಿನಾಂಕ; ಪ್ರಕರಣಗಳು; ಒಟ್ಟು; ಸಾವು; ಒಟ್ಟು

ಜೂ.21; 196; 1,272; 03; 64

ಜೂ.22; 126; 1,398; 03; 67

ಜೂ.23; 107; 1,505; 06; 73

ಜೂ.24; 173; 1,678; 05; 78

ಜೂ.25; 113; 1,791; 00; 78

ಜೂ.26; 144; 1,935; 03; 81

ಜೂ.27; 596; 2,531; 03; 84

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.