
ಬೆಂಗಳೂರು: ಅಶೋಕನಗರ ಠಾಣೆಯ ಪೊಲೀಸರು ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಿದ್ದು, ₹3.5 ಕೋಟಿ ಮೌಲ್ಯದ 3 ಕೆ.ಜಿ 200 ಗ್ರಾಂ ಎಂಡಿಎಂಎ ಕ್ರಿಸ್ಟಲ್ (ಡ್ರಗ್ಸ್) ಜಪ್ತಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಸೈಯದ್ ತಾರಿಕ್ ಇಕ್ಬಾಲ್ (33) ಹಾಗೂ ಶೇಖ್ ಮಹಮ್ಮದ್ ಅರ್ಬಾಜ್ (29) ಬಂಧಿತರು. ಬಂಧಿತರಿಂದ ಎರಡು ಮೊಬೈಲ್ ಹಾಗೂ ಡ್ರಗ್ಸ್ ಸಾಗಣೆ ಮಾಡಲು ಬಳಸುತ್ತಿದ್ದ ದ್ವಿಚಕ್ರ ವಾಹನವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಾತ್ಮೀದಾರರು ನೀಡಿದ ಖಚಿತ ಮಾಹಿತಿ ಆಧರಿಸಿ, ಹೊಸೂರು ರಸ್ತೆಯ ಹಿಂದೂ ರುದ್ರಭೂಮಿಯ ಬಳಿ ಹಾಗೂ ಕಾಡುಗೋಡಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
ಹೊಸ ವರ್ಷದ ಸಂದರ್ಭದಲ್ಲಿ ಪಬ್ ಹಾಗೂ ಕ್ಲಬ್‌ಗಳಲ್ಲಿ ನಡೆಯುವ ಪಾರ್ಟಿಗಳಿಗೆ ಪೂರೈಸಲು ಎಂಡಿಎಂಎ ಕ್ರಿಸ್ಟಲ್
ಅನ್ನು ನೈಜೀರಿಯಾ ದೇಶದ ಪ್ರಜೆಯಿಂದ ಖರೀದಿಸಿ, ದಾಸ್ತಾನು ಮಾಡಿಕೊಂಡಿದ್ದರು. ನೈಜೀರಿಯಾ ಪ್ರಜೆಗೆ ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಡ್ರಗ್ಸ್ ಮಾರಾಟ ಮಾಡಿ ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ ಎಂಡಿಎಂಎ ಕ್ರಿಸ್ಟಲ್ ದಾಸ್ತಾನು ಮಾಡಿಕೊಂಡಿದ್ದೆವು ಎಂಬುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ಈ ವರ್ಷ ಡ್ರಗ್ಸ್ ವಿರುದ್ಧ ಸಮರ ಸಾರಿದ್ದು ಈ ವರ್ಷ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ’ ಎಂದು ಅವರು ಹೇಳಿದರು.