ಬೆಂಗಳೂರು: ನಗರದ ಎಲ್ಲೆಡೆ ಗಣೇಶೋತ್ಸವದ ಸಂಭ್ರಮ ಮನೆ ಮಾಡಿತ್ತು. ಮನೆಗಳು, ಅಪಾರ್ಟ್‌ಮೆಂಟ್‌ಗಳಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತಿಯಿಂದ ಪೂಜಿಸಲಾಯಿತು.
ಸಂಘ–ಸಂಸ್ಥೆಗಳು ತಮ್ಮ ಬಡಾವಣೆಗಳಲ್ಲಿ ವಿನಾಯಕನನ್ನು ಆರಾಧಿಸಿದವು. ಪುಟ್ಟ ಮಕ್ಕಳೂ ತಮ್ಮ ಗಲ್ಲಿಗಳಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು. ಹಬ್ಬದ ಅಂಗವಾಗಿ ಮನೆಗಳು ಹಾಗೂ ಅಪಾರ್ಟ್‌ಮೆಂಟ್‌ಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿತ್ತು.
ಗಣೇಶನ ಮೂರ್ತಿ ಪ್ರತಿಷ್ಠಾಪಿಸಲಾಗಿದ್ದ ವೇದಿಕೆಗಳು ವಿಶೇಷ ರಂಗು ಪಡೆದುಕೊಂಡಿದ್ದವು. ಮಂಟಪಗಳು ವಿದ್ಯುತ್ ಅಲಂಕಾರದಿಂದ ಕಂಗೊಳಿಸಿದವು.
ಬುಧವಾರ ರಾತ್ರಿಯೇ ಹೆಚ್ಚಿನ ಮನೆಗಳಲ್ಲಿನ ಗಣೇಶನ ವಿಸರ್ಜನೆಯೂ ನಡೆಯಿತು. ನಗರದ ನಾನಾ ಬಡಾವಣೆಗಳಲ್ಲಿ ಗಣೇಶ ಹಬ್ಬದ ಪೂಜೆ, ವಿಶೇಷ ಊಟ, ಸಂಜೆ ನಂತರ ವಿಸರ್ಜನೆಯ ಸಂಭ್ರಮ ಮನೆ ಮಾಡಿತ್ತು.
ಸತತ ಆರು ದಶಕದಿಂದ ವಿಭಿನ್ನ ಗಣೇಶೋತ್ಸವಕ್ಕೆ ಹೆಸರುವಾಸಿಯಾಗಿರುವ ಬಸವನಗುಡಿ ಎಪಿಎಸ್ ಕಾಲೇಜು ಆವರಣದಲ್ಲಿ ವಿದ್ಯಾರಣ್ಯ ಯುವಕರ ಸಂಘ ಕೂರಿಸುವ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಚಟುವಟಿಕೆ ಈ ಬಾರಿ ವಿಶೇಷವಾಗಿದೆ. ಗುರುವಾರ ಸಂಜೆ ಇಲ್ಲಿ ಮಹಿಳೆಯರ ಚಂಡೆ ವಾದನ ಗಮನ ಸೆಳೆಯಿತು.
ಚಂದ್ರಾ ಬಡಾವಣೆಯ ಪ್ರಸನ್ನ ಗಣಪತಿ ದೇವಸ್ಥಾನ, ಯಲಹಂಕ ಚೌಡಪ್ಪ ಬಡಾವಣೆಯ ವರಸಿದ್ದಿ ವಿನಾಯಕ ದೇಗುಲ, ಕೆಂಪೇಗೌಡ ನಗರದ ಉದಯಭಾನು ಕಲಾ ಸಂಘ ಸಹಿತ ಹಲವು ಕಡೆಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲಾಗಿದೆ. ವಿವಿಧ ಸಂದೇಶ ಸಾರುವ ಗಣೇಶನ ಮೂರ್ತಿಗಳು ಗಮನ ಸೆಳೆಯುತ್ತಿವೆ.
ಟ್ಯಾಂಕರ್‌ಗಳಲ್ಲಿ ಮುಳುಗಿದ ಗಣೇಶ
ಬಿಬಿಎಂಪಿಯಿಂದ ನಗರದ 41 ಕೆರೆಗಳ ಅಂಗಳದಲ್ಲಿ ಟ್ಯಾಂಕರ್‌ಗಳನ್ನು ನಿಲ್ಲಿಸಿ ಗಣೇಶ ವಿಸರ್ಜನೆಗೆ ಅವಕಾಶ ಮಾಡಿಕೊಡಲಾಯಿತು. ಅಕ್ಕಪಕ್ಕದ ಬಡಾವಣೆ ನಿವಾಸಿಗಳು ಸಂಜೆಯಿಂದಲೇ ಸಂಚಾರಿ ವಾಹನಗಳ ಟ್ಯಾಂಕರ್‌ಗಳಲ್ಲಿ ಗಣೇಶನನ್ನು ಕುಟುಂಬದವರೊಂದಿಗೆ ವಿಸರ್ಜಿಸಿ ಖುಷಿಪಟ್ಟರು. ಕೆರೆಗಳಲ್ಲಿ ಗಣೇಶ ಮೂರ್ತಿ ವಿಸರ್ಜನೆ ಮಾಡದಂತೆ ಹಲವು ವರ್ಷಗಳಿಂದ ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಗೃತಿ ಮೂಡಿಸಲಾಗುತ್ತಿದ್ದು ಈ ಬಾರಿಯೂ ಬಿಬಿಎಂಪಿ ನೋಡಲ್ ಅಧಿಕಾರಿಗಳು ಅಲ್ಲಲ್ಲಿ ನಿಂತು ಮಾಹಿತಿ ನೀಡಿದರು. ಇದಲ್ಲದೇ ಹೆಬ್ಬಾಳ ಸ್ಯಾಂಕಿ ಯಡಿಯೂರು ಹಲಸೂರು ಕೆರೆಗಳಲ್ಲಿ ಸೆಪ್ಟಂಬರ್ ತಿಂಗಳಲ್ಲೂ ಗಣೇಶ ವಿಸರ್ಜನೆಗೆ ವ್ಯವಸ್ಥೆ ಇರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.