
ಸಾಂದರ್ಭಿಕ ಚಿತ್ರ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ 550 ಕಿ.ಮೀ ಉದ್ದದ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಿಗೆ ಒಂದು ಲೇಯರ್ ಡಾಂಬರು ಹಾಕಲು ಸರ್ಕಾರಕ್ಕೆ ಜಿಬಿಎ ಪ್ರಸ್ತಾವ ಸಲ್ಲಿಸಿದೆ.
ಮೇಲ್ಮೈ ಪದರ ಡಾಂಬರು ಹಾಕಲು ಪ್ರತಿ ಕಿ.ಮೀ ಗೆ ₹2 ಕೋಟಿ ವೆಚ್ಚವಾಗಲಿದೆ. ₹1,100 ಕೋಟಿ ವೆಚ್ಚದಲ್ಲಿ 550 ಕಿ.ಮೀ ಉದ್ದದ ರಸ್ತೆಗಳಿಗೆ ಡಾಂಬರು ಹಾಕಲು ಯೋಜಿಸಲಾಗಿದೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದರು.
ಸರ್ಕಾರದಿಂದ ಅನುಮೋದನೆ ದೊರೆತ ಕೂಡಲೇ ಡಾಂಬರೀಕರಣ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.
ನಿರ್ವಹಣಾ ಅವಧಿ ಮುಗಿದಿರುವ ಮುಖ್ಯ ಹಾಗೂ ಉಪ ಮುಖ್ಯ ರಸ್ತೆಗಳಲ್ಲಿ ಜಿಬಿಎ ವತಿಯಿಂದ ಡಾಂಬರು ಹಾಕಲಾಗುತ್ತದೆ. ನಿರ್ವಹಣಾ ಅವಧಿ ಇರುವ ರಸ್ತೆಗಳಲ್ಲಿ ಆಯಾ ಗುತ್ತಿಗೆದಾರರಿಂದಲೇ ಗುಂಡಿ ದುರಸ್ತಿ ಕಾಮಗಾರಿಗಳನ್ನು ನಡೆಸಲು ಸೂಚಿಸಲಾಗಿದೆ ಎಂದು ಹೇಳಿದರು.
ವಾರ್ಡ್ ರಸ್ತೆಗಳಲ್ಲೂ ಗುಂಡಿ ಮುಚ್ಚುವ ಅಥವಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ನಗರ ಪಾಲಿಕೆಗಳ ವತಿಯಿಂದ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಗಾಂಧಿ ನಗರ ವಿಧಾನ ಸಭೆ ಕ್ಷೇತ್ರದಲ್ಲಿ ವೈಟ್ ಟಾಪಿಂಗ್ ಕಾಮಗಾರಿಗೆ ಅ.21ರಂದು ಚಾಲನೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ‘ಎಲ್ಲ ರಸ್ತೆಗಳಿಗೆ ಒಂದು ಲೇಯರ್ ಡಾಂಬರು ಹಾಕಿ’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ವೇದಿಕೆಯಲ್ಲೇ ಆದೇಶ ನೀಡಿದ್ದರು. ಇದಾದ ಎರಡೇ ದಿನದಲ್ಲಿ ಜಿಬಿಎ ವತಿಯಿಂದ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಮುಖ್ಯ ಮತ್ತು ಉಪ ಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹1,100 ಕೋಟಿ, ವಾರ್ಡ್ ರಸ್ತೆ, ಚರಂಡಿ ಅಭಿವೃದ್ಧಿಗೆ ₹1,100 ಕೋಟಿ ವೆಚ್ಚದ ಎರಡು ಕ್ರಿಯಾಯೋಜನೆಗಳನ್ನು ಸಲ್ಲಿಸುವಂತೆ ಜಿಬಿಎಗೆ ನಗರಾಭಿವೃದ್ಧಿ ಇಲಾಖೆ ಆ.15 ರಂದು ಸೂಚಿಸಿತ್ತು.
ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಅಭಿವೃದ್ಧಿಗೆ ₹1,100 ಕೋಟಿ ಕ್ರಿಯಾ ಯೋಜನೆಯನ್ನು ವಿಶೇಷ ಮೂಲಸೌಕರ್ಯ ಬಂಡವಾಳ ಬೆಂಬಲ ಯೋಜನೆಯಡಿ ಪ್ರಸ್ತಾವ ಸಲ್ಲಿಸಬೇಕು. ವಾರ್ಡ್‌ಗಳ ರಸ್ತೆ, ಚರಂಡಿ ಅಭಿವೃದ್ಧಿ, ನಿರ್ವಹಣೆ ಕಾಮಗಾರಿಗಳ ₹1,100 ಕೋಟಿ ಕ್ರಿಯಾ ಯೋಜನೆಯನ್ನು ಮುಖ್ಯಮಂತ್ರಿಯವರ ವಿವೇಚನಾ ನಿಧಿಯಲ್ಲಿ ಕೈಗೊಳ್ಳಲು ಪ್ರಸ್ತಾವ ಸಲ್ಲಿಸಬೇಕು ಎಂದು ತಿಳಿಸಲಾಗಿತ್ತು.
ಎರಡೂ ಕ್ರಿಯಾ ಯೋಜನೆಗಳನ್ನು ಐದು ನಗರ ಪಾಲಿಕೆಗಳಿಂದ ಪಡೆದು, ಪರಿಶೀಲಿಸಿ, ಕ್ರೋಡೀಕರಿಸಿ ಸರ್ಕಾರಕ್ಕೆ ಶೀಘ್ರ ಸಲ್ಲಿಸಬೇಕು ಎಂದು ಜಿಬಿಎ ಮುಖ್ಯ ಆಯುಕ್ತರಿಗೆ ಸೂಚಿಸಲಾಗಿತ್ತಾದರೂ, 500 ಕಿ.ಮೀ ಉದ್ದದ ಮುಖ್ಯ ಮತ್ತು ಉಪಮುಖ್ಯ ರಸ್ತೆಗಳಿಗೆ ಒಂದು ಲೇಯರ್ ಡಾಂಬರು ಹಾಕಲು ಮಾತ್ರ ಪ್ರಸ್ತಾವ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.