ADVERTISEMENT

ಬೆಂಗಳೂರು: ಗೋಕಾಕ್ ಏಕಲವ್ಯ ಕೇಂದ್ರ ಸಂಸ್ಥಾಪಕ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2021, 12:01 IST
Last Updated 14 ಜೂನ್ 2021, 12:01 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಾತಿಯ ದೈಹಿಕ ಹಾಗೂ ಲಿಖಿತ ಪರೀಕ್ಷೆಗೆ ಅಸಲಿ ಅಭ್ಯರ್ಥಿ ಪರವಾಗಿ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಗೋಕಾಕ್‌ನಲ್ಲಿರುವ ಏಕಲವ್ಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಸ್ಥಾಪಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

‘ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಶಿವಮೊಗ್ಗ ಹಾಗೂ ಹುಬ್ಬಳ್ಳಿ–ಧಾರವಾಡದಲ್ಲಿ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಈ ಬಗ್ಗೆ ರಾಜ್ಯದ ವಿವಿಧ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದವು. ಸಿಐಡಿ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣಗಳ ತನಿಖೆ ನಡೆಯುತ್ತಿದೆ’ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

‘ನಕಲಿ ಅಭ್ಯರ್ಥಿಗಳು ಹಾಜರಾಗುವಂತೆ ಸಂಚು ಮಾಡಿದ್ದ ಏಕಲವ್ಯ ಸಂಸ್ಥೆಯ ಲಕ್ಷ್ಮಣ ಉದ್ದಪ್ಪ ಬಂಡಿ, ಭೀಮಪ್ಪ ಮಹಾದೇವ ಹುಲ್ಲೋಳಿ ಅಲಿಯಾಸ್ ಭೀಮ್‌ಶಿ, ಲಕ್ಷ್ಮಣ ಮುತ್ತಪ್ಪ ಪರಣ್ಣವರ್ ಹಾಗೂ ಮಲ್ಲಿಕಾರ್ಜುನ್ ಯಮುನಪ್ಪ ಬಬಲಣ್ಣವರ್ ಎಂಬುವರನ್ನು ಬಂಧಿಸಲಾಗಿದೆ. ಬಸವರಾಜ್ ದುಂಡಾನಟ್ಟಿ ಹಾಗೂ ಇತರರು ತಲೆಮರೆಸಿಕೊಂಡಿದ್ದಾರೆ’ ಎಂದೂ ತಿಳಿಸಿದರು.

ADVERTISEMENT

‘ಪ್ರಕರಣ ಸಂಬಂಧ ಇದುವರೆಗೂ ಒಟ್ಟು 61 ಆರೋಪಿಗಳನ್ನು ಬಂಧಿಸಿದಂತಾಗಿದೆ. ₹ 1.54 ಲಕ್ಷ ನಗದು, ಕಾರುಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್‌ ಡಿಸ್ಕ್, ಪೆನ್‌ಡ್ರೈವ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. 21 ಅಭ್ಯರ್ಥಿಗಳನ್ನು ಡಿಬಾರ್ ಮಾಡಲಾಗಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.