ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು.
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಜಾಗವನ್ನು ತೆರವುಗೊಳಿಸುವ ಪ್ರಕ್ರಿಯೆ ವೇಗ ಪಡೆದುಕೊಂಡಿದ್ದು, ಆರು ತಿಂಗಳಿನಿಂದ ಈಚೆಗೆ 278.19 ಎಕರೆ ಒತ್ತುವರಿ ತೆರವು ಮಾಡಲಾಗಿದೆ.
ಮಾರ್ಗಸೂಚಿ ಪ್ರಕಾರ ಇದರ ಮೌಲ್ಯ ₹912.48 ಕೋಟಿ. ಆದರೆ, ಮಾರುಕಟ್ಟೆಯಲ್ಲಿನ ಮೌಲ್ಯ ₹7,299.84 ಕೋಟಿ ಎಂದು ಅಂದಾಜಿಸಲಾಗಿದೆ.
‘ಬೆಂಗಳೂರು ಸುತ್ತಮುತ್ತ ನಡೆದಿರುವ ಸರ್ಕಾರಿ ಭೂಮಿಯ ಒತ್ತುವರಿ ತೆರವುಗೊಳಿಸುವುದಕ್ಕೆ ಮೊದಲ ಆದ್ಯತೆ ನೀಡಿದ್ದೇವೆ. ಎಲ್ಲೆಲ್ಲಿ ಒತ್ತುವರಿ ಆಗಿದೆ ಎಂದು ತಹಶೀಲ್ದಾರ್‌ಗಳ ಮೂಲಕ ಗುರುತಿಸಿ, ಅದನ್ನು ತೆರವು
ಗೊಳಿಸುವ ಕಾರ್ಯವನ್ನು ಪ್ರತಿವಾರ ಮಾಡುತ್ತಿದ್ದೇವೆ’ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
‘ಸರ್ಕಾರಿ ಭೂಮಿ ಒತ್ತುವರಿಗೆ ಸಂಬಂಧಪಟ್ಟಂತೆ ಎ.ಟಿ.ರಾಮಸ್ವಾಮಿ ನೇತೃತ್ವದ ಸಮಿತಿ ಮತ್ತು ಸರ್ಕಾರಿ ಜಮೀನುಗಳ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾಗಿದ್ದ ವಿ.ಬಾಲಸುಬ್ರಮಣಿಯನ್ ಸಮಿತಿ ನೀಡಿರುವ ವರದಿಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ. ಹೀಗಾಗಿ ಎಷ್ಟು ಭೂಮಿ ಒತ್ತುವರಿಯಾಗಿದೆ ಎಂದು ಖಚಿತವಾಗಿ ಹೇಳಲು ಆಗುವುದಿಲ್ಲ. ಈ ವರದಿಗಳಲ್ಲಿ ಪ್ರಸ್ತಾಪವಾಗಿರುವ ಸರ್ವೆ ನಂಬರ್‌ಗಳನ್ನು ಆಧರಿಸಿ, ತಹಶೀಲ್ದಾರ್‌ಗಳಿಂದ ವರದಿ ಪಡೆದು ಒತ್ತುವರಿ ತೆರವು ಮಾಡುತ್ತಿದ್ದೇವೆ’ ಎಂದು ಅವರು ವಿವರಿಸಿದರು.
‘ಸರ್ಕಾರಿ ಜಾಗದಲ್ಲಿ ಶಾಲೆಗಳು, ಅಂಗನವಾಡಿಗಳು, ಬಸ್ ನಿಲ್ದಾಣಗಳು ತಲೆ ಎತ್ತಿವೆ. ಬಾಣಸವಾಡಿ ಕೆರೆ ಜಾಗದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು (ಬಿಡಿಎ) ಬಡಾವಣೆ ಮಾಡಿದ್ದಾರೆ. ಇಂತಹ ನೂರಾರು ಪ್ರಕರಣಗಳು ಇವೆ. ಇವುಗಳನ್ನು ಯಾವ ರೀತಿ ಇತ್ಯರ್ಥಪಡಿಸಬೇಕು ಎಂಬುದು ಸರ್ಕಾರದ ಮಟ್ಟದಲ್ಲೇ ನಿರ್ಧಾರವಾಗಬೇಕು’ ಎನ್ನುತ್ತಾರೆ ಜಗದೀಶ್.
‘ಬಾಗಲೂರಿನಲ್ಲಿ 30 ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಖಾಸಗಿಯವರು ಬಡಾವಣೆ ನಿರ್ಮಿಸಿದ್ದಾರೆ. ಅಲ್ಲಿ ಖಾಸಗಿ ಜಾಗ ಇರುವುದು 12 ಎಕರೆ ಮಾತ್ರ. ಸರ್ಕಾರಿ ಭೂಮಿ ತೆರವುಗೊಳಿಸುವ ಸಂಬಂಧ ನೋಟಿಸ್ ನೀಡಲಾಗಿತ್ತು. ಆದರೆ, ನ್ಯಾಯಾಲಯಕ್ಕೆ ಹೋಗಿ ರಜಾ ದಿನವಾದ ಭಾನುವಾರ ತಡೆಯಾಜ್ಞೆ ತಂದಿದ್ದಾರೆ. ಇಂತಹ ಹಲವು ಪ್ರಕರಣಗಳು ಇವೆ. ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ವಕೀಲರನ್ನು ನೇಮಕ ಮಾಡಿ, ತಡೆಯಾಜ್ಞೆ ತೆರವಿಗೆ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಹೇಳಿದರು.
ಮಂಜೂರು ಮಾಡಲು ಬರಲ್ಲ: ಬಿಬಿಎಂಪಿಯಿಂದ 18 ಕೀ.ಮೀ. ವ್ಯಾಪ್ತಿಯ ಒಳಗೆ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಜಾಗವನ್ನು ರೈತರಿಗೆ ಮಂಜೂರು ಮಾಡಿಕೊಡಲು ಬರುವುದಿಲ್ಲ. ಆದರೂ, ರೈತರು ಅರ್ಜಿ ಹಾಕಿದ್ದಾರೆ. ಈ ರೀತಿ ಸಾಗುವಳಿ ಮಾಡುತ್ತಿರುವ ನಾಲ್ಕು ಸಾವಿರ ಎಕರೆ ಜಮೀನನ್ನು ಗುರುತಿಸಲಾಗಿದೆ. ಈ ಪ್ರಕರಣಗಳನ್ನು ಯಾವ ರೀತಿ ಇತ್ಯರ್ಥ ಮಾಡಬೇಕು ಎಂದು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಾಗುತ್ತದೆ ಎಂದು ಅವರು ವಿವರಿಸಿದರು.
ಕೆರೆಗಳ ಒತ್ತುವರಿ ತೆರವು: ನಗರ ಜಿಲ್ಲೆಯಲ್ಲಿ ಎಲ್ಲ ಕೆರೆಗಳ ಅಳತೆ ಮಾಡಿದ್ದು 837 ಕೆರೆಗಳ ಪೈಕಿ 724 ಕೆರೆಗಳು ಒತ್ತುವರಿಯಾಗಿವೆ. ಈಗಾಗಲೇ 484 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. 240 ಕೆರೆಗಳ ಒತ್ತುವರಿ ತೆರವು ಬಾಕಿ ಇದ್ದು, ಹಂತ ಹಂತವಾಗಿ ತೆರವು ಮಾಡಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.